ಜಿಇಎಸಿ ಸದಸ್ಯರ ನೇಮಕಾತಿಯಲ್ಲಿ ಹಿತಾಸಕ್ತಿಗಳ ಸಂಘರ್ಷ: ಸಂ.ಸಮಿತಿ
ಹೊಸದಿಲ್ಲಿ,ಆ.27: ದೇಶದ ಜೈವಿಕ ತಂತ್ರಜ್ಞಾನವನ್ನು ನಿಯಂತ್ರಿಸುತ್ತಿರುವ ಜೆನೆಟಿಕ್ ಇಂಜಿನಿಯರಿಂಗ್ ಅನುಮೋದನಾ ಸಮಿತಿ(ಜಿಇಎಸಿ)ಯ ಉನ್ನತ ಮೂರು ಹುದ್ದೆಗಳಲ್ಲಿ ಎರಡರಲ್ಲಿ ಪರಿಸರ ಸಚಿವಾಲಯದ ಅಧಿಕಾರಿಗಳೇ ಇದ್ದಾರೆ ಮತ್ತು ಸಮಿತಿಯ ಸದಸ್ಯರ ನೇಮಕಾತಿಯಲ್ಲಿ ಹಿತಾಸಕ್ತಿಗಳ ಸಂಘರ್ಷವಿದೆ ಎಂದು ತಿಳಿಸಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಪರಿಸರ ಮತ್ತು ಅರಣ್ಯ ಕುರಿತ ಸಂಸದೀಯ ಸ್ಥಾಯಿಸಮಿತಿಯು, ತಜ್ಞರೋರ್ವರು ಜಿಇಎಸಿಯ ಮುಖ್ಯಸ್ಥರಾಗಿರಬೇಕು ಎಂದು ಒತ್ತಿ ಹೇಳಿದೆ.
ಸಂಸದೀಯ ಸಮಿತಿಯು ‘ತಳಿ ಮಾರ್ಪಾಡಿತ ಬೆಳೆಗಳು ಮತ್ತು ಪರಿಸರದ ಮೇಲೆ ಅವುಗಳ ಪರಿಣಾಮ’ ಕುರಿತು ತನ್ನ 301ನೇ ವರದಿಯಲ್ಲಿ ಮಾಡಿರುವ ಶಿಫಾರಸುಗಳಲ್ಲಿ ಈ ಅಂಶಗಳನ್ನು ಬೆಟ್ಟು ಮಾಡಿದೆ.
ಜಿಇಎಸಿಯನ್ನು ಮೊದಲ ಬಾರಿಗೆ 1990,ಮೇ 28ರಂದು ರಚಿಸಲಾಗಿತ್ತು ಮತ್ತು 2013,ಮಾ.11ರಂದು ಅದನ್ನು ಮೂರು ವರ್ಷಗಳ ಅವಧಿಗೆ ಕೊನೆಯ ಬಾರಿಗೆ ಪುನರ್ ರಚಿಸಲಾಗಿತ್ತು. ನಂತರ ನೂತನ ಸಮಿತಿಯು ಪುನರ್‌ರಚನೆಯಾಗುವವರೆಗೆ ಅದರ ಅಧಿಕಾರಾವಧಿಯನ್ನು ವಿಸ್ತರಿಸಲಾಗಿದೆ ಎಂಬ ಮಾಹಿತಿಯನ್ನು ತನಗೆ ನೀಡಲಾಗಿದೆ ಎಂದಿರುವ ಸಮಿತಿಯು, ಜಿಇಎಸಿಯ ರಚನೆಯಲ್ಲಿ ‘ತಾತ್ಪೂರ್ತಿಕ’ ಧೋರಣೆಯನ್ನು ಅನುಸರಿಸಲಾಗುತ್ತಿರುವ ಬಗ್ಗೆ ಹಾಗೂ ಅದರ ಸದಸ್ಯರ ಆಯ್ಕೆಗಾಗಿ ಪರಿಸರ ಸಚಿವಾಲಯವು ಪಾಲಿಸುತ್ತಿರುವ ಮಾನದಂಡಗಳ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದೆ.
ಜಿಇಎಸಿಯ ಮುಖ್ಯಸ್ಥರು ಯಾವುದೇ ವಿಷಯದಲ್ಲಿ ನಿರ್ಧಾರಕ್ಕೆ ಬರುವ ಮುನ್ನ ವೈಜ್ಞಾನಿಕ ದತ್ತಾಂಶಗಳು ಮತ್ತು ಸಂಶೋಧನೆಯ ವಿಶ್ಲೇಷಣೆಯನ್ನು ಅರಿತುಕೊಳ್ಳುವುದು ಮುಖ್ಯವಾಗಿದೆ. ಹೀಗಾಗಿ ಜೈವಿಕ ತಂತ್ರಜ್ಞಾನ ತಜ್ಞರು ಅದರ ಮುಖ್ಯಸ್ಥರಾಗಿರುವುದು ಸೂಕ್ತವಾಗಿರುತ್ತದೆ ಎಂದು ಸಂಸದೀಯ ಸಮಿತಿಯು ಹೇಳಿದೆ.