ಬಿಎಸ್‌ಎಫ್‌ನಲ್ಲಿ ನೀಡುವ ಆಹಾರವನ್ನು ಯಾರು ಬೇಕಾದರೂ ಪರೀಕ್ಷಿಸಬಹುದು: ಮುಖ್ಯಸ್ಥ ಶರ್ಮಾ
ಹೊಸದಿಲ್ಲಿ,ಆ.27: ಗಡಿ ರಕ್ಷಣಾ ಪಡೆ(ಬಿಎಸ್‌ಎಫ್)ಯ ಪಾಕಶಾಲೆಗಳಲ್ಲಿ ಯಾವಾಗಲೂ ಉತ್ತಮ ಗುಣಮಟ್ಟದ ಆಹಾರವೇ ತಯಾರಾಗುತ್ತದೆ ಮತ್ತು ಯಾರೇ ಆದರೂ ಅದರ ಯಾವುದೇ ನೆಲೆಗೆ ಯಾವಾಗ ಬೇಕಾದರೂ ದಿಢೀರ್ ಭೇಟಿ ನೀಡಿ ಅದನ್ನು ಪರೀಕ್ಷಿಸಬಹುದು ಎಂದು ಬಿಎಸ್‌ಎಫ್ ಮುಖ್ಯಸ್ಥ ಕೆ.ಕೆ.ಶರ್ಮಾ ಅವರು ರವಿವಾರ ಇಲ್ಲಿ ಸವಾಲು ಹಾಕಿದರು. ಬಿಎಸ್‌ಎಫ್‌ನಲ್ಲಿ ಕಳಪೆ ಗುಣಮಟ್ಟದ ಆಹಾರವನ್ನು ನೀಡಲಾಗುತ್ತಿದೆ ಎಂದು ಯೋಧ ತೇಜ್ ಬಹಾದೂರ್ ಯಾದವ್ ಮಾಡಿದ್ದ ಆರೋಪವನ್ನು ಇತರ ಯೋಧರ ನೈತಿಕ ಸ್ಥೈರ್ಯವನ್ನು ಉಡುಗಿಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಬಳಸಿಕೊಳ್ಳುತ್ತಿದೆ ಎಂದು ಅವರು ದೂರಿದರು.
ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ತಾನು 2012ರಲ್ಲಿ ಹೆಚ್ಚುವರಿ ಡಿಜಿಯಾಗಿ ಬಿಎಸ್‌ಎಫ್‌ಗೆ ಸೇರಿದ್ದು, ಯೋಧರಾಗಲೀ ಅಧಿಕಾರಿಗಳಾಗಲೀ ಆಹಾರದ ಕುರಿತು ಎಂದೂ ದೂರಿರಲಿಲ್ಲ. ವರ್ಗಾವಣೆ ಅಥವಾ ನಿಯೋಜನೆ ಕುರಿತು ವಿವಾದಗಳಿರಬಹುದು. ಹೀಗಾಗಿ ಕಳಪೆ ಆಹಾರದ ಬಗ್ಗೆ ದೂರಿಕೊಂಡು ಈ ವ್ಯಕ್ತಿ(ಯಾದವ್) ಫೇಸ್‌ಬುಕ್‌ನಲ್ಲಿ ವೀಡಿಯೊ ಪೋಸ್ಟ್ ಮಾಡಿದಾಗ ತನಗೆ ತೀವ್ರ ಆಘಾತವಾಗಿತ್ತು ಎಂದು ತಿಳಿಸಿದರು.
ಪಡೆಯಲ್ಲಿ ಈಗಾಗಲೇ ಆರೋಗ್ಯಕರ ವ್ಯವಸ್ಥೆಗಳಿವೆ. ಪಾಕಶಾಲೆಗಳಲ್ಲಿ ತಯಾರಾಗುವ ಆಹಾರವನ್ನು ನಿರಂತರವಾಗಿ ಪರೀಕ್ಷಿಸಲಾಗುತ್ತದೆ. ಆಹಾರವು ಒಂದು ಸಮಸ್ಯೆಯೇ ಅಲ್ಲ ಎಂದ ಅವರು, ಇದನ್ನು ಯಾರು ಬೇಕಾದರೂ ಪರೀಕ್ಷಿಸಬಹುದು. ಆಹಾರದ ಗುಣಮಟ್ಟದ ಬಗ್ಗೆ ತಾನು ಖಾತರಿ ನೀಡುತ್ತೇನೆ ಎಂದರು.
ಈ ವರ್ಷದ ಆರಂಭದಲ್ಲಿ ಸಂಸದೀಯ ಸಮಿತಿಯು ತನ್ನನ್ನು ವಿಚಾರಣೆಗೊಳ ಪಡಿಸಿದಾಗಲೂ ಇದನ್ನೇ ಹೇಳಿದ್ದೇನೆ ಎಂದು ಶರ್ಮಾ ತಿಳಿಸಿದರು.
ಗಡಿಯಲ್ಲಿ ದುರ್ಗಮ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವ ತಮಗೆ ನೀರಿನಂತಹ ‘ದಾಲ್’ ಮತ್ತು ಸುಟ್ಟು ಕರಕಲಾದ ಚಪಾತಿಗಳನ್ನು ನೀಡಲಾಗುತ್ತಿದೆ ಎಂದು ಯಾದವ್ ಕಳೆದ ಜನವರಿಯಲ್ಲಿ ಆರೋಪಿಸಿದ್ದರು. ವಿಚಾರಣೆಯ ಬಳಿಕ ಈ ಆರೋಪ ಸುಳ್ಳೆಂದು ಕಂಡು ಬಂದಿದ್ದು, ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಯಾದವ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ವೀಡಿಯೊಗಳನ್ನು ಐಎಸ್‌ಐ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅದು ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿಸಿತ್ತು ಎಂದು ಶರ್ಮಾ ತಿಳಿಸಿದರು.