ಸದ್ದಿಲ್ಲದೆ ದಿನಂಪ್ರತಿ ಏರುತ್ತಿದೆ ತೈಲೋತ್ಪನ್ನ ದರ
ಹೊಸದಿಲ್ಲಿ, ಆ.27: ದಿನಂಪ್ರತಿ ತೈಲೋತ್ಪನ್ನ ದರದ ಪರಿಷ್ಕರಣೆ ವ್ಯವಸ್ಥೆ ಜಾರಿಗೆ ಬಂದ ಬಳಿಕ ಜುಲೈ ತಿಂಗಳಿನಿಂದ ಇದುವರೆಗೆ ಪೆಟ್ರೋಲ್ ದರ ಲೀಟರ್‌ಗೆ 6 ರೂ, ಡೀಸೆಲ್ ದರ ಲೀಟರ್‌ಗೆ 3.67 ರೂ.ನಷ್ಟು ಹೆಚ್ಚಳವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತೈಲ ಬೆಲೆ ಅತ್ಯಧಿಕ ಮಟ್ಟಕ್ಕೆ ತಲುಪಿದೆ .
ದಿಲ್ಲಿಯಲ್ಲಿ ಈಗ ಲೀಟರ್ ಡೀಸೆಲ್ ಬೆಲೆ 57.03 ರೂ. ಆಗಿದ್ದರೆ ಲೀಟರ್ ಪೆಟ್ರೋಲ್ ಬೆಲೆ 69.04 ರೂ. ಆಗಿದೆ. ಕಳೆದ 15 ವರ್ಷಗಳಿಂದ ಅನುಸರಿಸುತ್ತಿದ್ದ ಪ್ರತೀ ತಿಂಗಳ 1ನೇ ತಾರೀಕು ಹಾಗೂ 16ನೇ ತಾರೀಕಿನಂದು ತೈಲ ಬೆಲೆ ಪರಿಷ್ಕರಿಸುವ ಕ್ರಮಕ್ಕೆ ತಿಲಾಂಜಲಿ ನೀಡಿದ್ದ ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು , ದಿನಂಪ್ರತಿ ಬೆಲೆ ಪರಿಷ್ಕರಿಸುವ ವ್ಯವಸ್ಥೆಯನ್ನು ಅಂಗೀಕರಿಸಿದೆ. ಜೂನ್ 16ರಿಂದ ಪ್ರತೀ ದಿನ ಬೆಳಿಗ್ಗೆ 6:00 ಗಂಟೆಗೆ ತೈಲ ಬೆಲೆಯನ್ನು ಪರಿಷ್ಕರಿಸಲಾಗುತ್ತಿದೆ.
ಈ ಹಿಂದೆ ಒಮ್ಮೆಲೇ 2 ರೂ. ಅಥವಾ 3 ರೂ. ದರ ಏರಿದಾಗ ಜನತೆ ದೂರುತ್ತಿದ್ದರು. ಆದರೆ ಈಗ ಪ್ರತೀದಿನ 1 ಪೈಸೆಯಿಂದ 15 ಪೈಸೆಯಷ್ಟು ಏರಿಸಲಾಗುತ್ತಿದೆ. ಆದರೆ ಇದು ಜನರಿಗೆ ಗೊತ್ತೇ ಆಗುತ್ತಿಲ್ಲ ಎಂದು ತೈಲ ಕಂಪೆನಿಯ ಹಿರಿಯ ಅಧಿಕಾರಿಯೋರ್ವರು ಹೇಳಿದ್ದಾರೆ. ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಳಿತವಾದ ಸಂದರ್ಭ ಈ ವ್ಯತ್ಯಾಸವನ್ನು 15 ದಿನಕ್ಕೊಮ್ಮೆ ಗ್ರಾಹಕರ ಮೇಲೆ ವಿಧಿಸಲಾಗುತ್ತಿತ್ತು. ಆದರೆ ಈಗ ಆ ಕ್ಷಣಕ್ಕೇ ಇದು ಗ್ರಾಹಕರಿಗೆ ವರ್ಗಾವಣೆಯಾಗುತ್ತದೆ.
ಹೆಚ್ಚಿನ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ವಾರ ತೈಲ ದರ ಏರಿಕೆಯಾದರೆ, ಮತ್ತೊಂದು ವಾರ ಇಳಿಕೆಯಾಗುತ್ತದೆ. ಆದ್ದರಿಂದ 15 ದಿನದ ದರ ಪರಿಷ್ಕರಣೆ ಪದ್ದತಿಯಲ್ಲಿ ಸಾಮಾನ್ಯವಾಗಿ ದರದಲ್ಲಿ ಹೆಚ್ಚಿನ ಏರಿಳಿತವಾಗದೆ ಯಥಾಸ್ಥಿತಿ ಇರುತ್ತಿತ್ತು ಎಂದು ಅಧಿಕಾರಿ ಹೇಳಿದ್ದಾರೆ. 2002ರಿಂದ ತೈಲ ದರವನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಲಾಗಿತ್ತು.
2004ರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏಕಾಏಕಿ ಏರಿತೊಡಗಿದಾಗ ಮುಕ್ತ ವ್ಯವಸ್ಥೆಗೆ ಸ್ವಲ್ಪ ಮಟ್ಟಿನ ಹಿನ್ನಡೆಯಾಯಿತು. ಅಂತಾರಾಷ್ಟ್ರೀಯ ದರ ಹೆಚ್ಚಳಕ್ಕೆ ಅನುಗುಣವಾಗಿ ದರ ನಿಗದಿಗೊಳಿಸಲು 15 ದಿನದ ದರ ಪರಿಷ್ಕರಣೆಯಿಂದ ತೊಂದರೆಯಾಗುತ್ತಿದೆ ಎಂದು ತೈಲ ಸಂಸ್ಥೆಗಳು ದೂರಿದಾಗ, ಪ್ರತೀ ದಿನ ದರ ವ್ಯತ್ಯಾಸಗೊಳಿಸುವ ವ್ಯವಸ್ಥೆ ಜಾರಿಗೆ ಬಂದಿದೆ.