×
Ad

ಧಾರ್ಮಿಕ ನಂಬಿಕೆಯ ನೆಪದಲ್ಲಿ ಹಿಂಸಾಚಾರ ಸಹಿಸಲಾಗದು: ಪ್ರಧಾನಿ ಮೋದಿ

Update: 2017-08-27 21:45 IST

 ಹೊಸದಿಲ್ಲಿ, ಆ.27: ಧಾರ್ಮಿಕ ನಂಬಿಕೆಯ ನೆಪದಲ್ಲಿ ನಡೆಸುವ ಯಾವುದೇ ರೀತಿಯ ಹಿಂಸಾಚಾರವನ್ನು ಸಹಿಸಲಾಗದು. ತಪ್ಪಿತಸ್ಥರನ್ನು ಶಿಕ್ಷಿಸದೆ ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಎಷ್ಟೇ ದೊಡ್ಡ ವ್ಯಕ್ತಿಯಾದರೂ ಕಾನೂನಿನ ಎದುರು ತಲೆಬಾಗಲೇ ಬೇಕು. ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶವಿಲ್ಲ ಎಂದು ಡೇರಾ ಸಚ್ಚಾ ಸೌದದ ಮುಖಂಡ ಗುರ್ಮಿತ್ ಸಿಂಗ್ ಬೆಂಬಲಿಗರು ನಡೆಸಿದ ಹಿಂಸಾಚಾರವನ್ನು ಪರೋಕ್ಷವಾಗಿ ಉಲ್ಲೇಖಿಸಿ ಪ್ರಧಾನಿ ಹೇಳಿದರು.

ಹಿಂಸಾತ್ಮಕ ಮಾರ್ಗದಿಂದ ತಮ್ಮ ಅಸಮಾಧಾನ ವ್ಯಕ್ತಪಡಿಸುವ, ಕಾನೂನನ್ನು ಕೈಗೆತ್ತಿಕೊಳ್ಳುವ ವ್ಯಕ್ತಿ ಅಥವಾ ಸಂಘಟನೆಯನ್ನು ಈ ದೇಶವಷ್ಟೇ ಅಲ್ಲ, ಯಾವುದೇ ಸರಕಾರ ಕೂಡಾ ಸಹಿಸಲು ಸಾಧ್ಯವೇ ಇಲ್ಲ . ಕಾನೂನು ಓರ್ವ ವ್ಯಕ್ತಿಯನ್ನು ಅಪರಾಧಿ ಎಂದು ಘೋಷಿಸಿದರೆ ಅಂತವರನ್ನು ಶಿಕ್ಷೆಗೆ ಒಳಪಡಿಸಲಾಗುವುದು. ಇದರಲ್ಲಿ ಬೇರೆ ಮಾತೇ ಇಲ್ಲ ಎಂದು ಅವರು ನುಡಿದರು.

  ಯಾವುದೇ ತೊಂದರೆಯ ನಿವಾರಣೆಗೆ ಅವಕಾಶ ಮತ್ತು ಎಲ್ಲರಿಗೂ ನ್ಯಾಯ ಒದಗಿಸುವ ಅವಕಾಶವನ್ನು ಡಾ ಅಂಬೇಡ್ಕರ್ ರಚಿಸಿರುವ ಸಂವಿಧಾನದಲ್ಲಿ ನೀಡಲಾಗಿದೆ. ಬುದ್ಧ ಮತ್ತು ಮಹಾತ್ಮಾ ಗಾಂಧೀಜಿಯವರಂತ ಮಹಾನ್ ವ್ಯಕ್ತಿಗಳು ಹಾಕಿಕೊಟ್ಟ ಅಹಿಂಸೆಯ ಪರಂಪರೆಯನ್ನು ಮರೆಯಬಾರದು ಎಂದವರು ಹೇಳಿದರು.

  ತಮ್ಮ ತಿಂಗಳ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ಮಾತನಾಡಿದ ಪ್ರಧಾನಿ, ಬುದ್ಧ, ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್‌ರಂತಹ ಮಹಾನ್ ನಾಯಕರಿದ್ದ ನಾಡು ನಮ್ಮದು. ಶತಮಾನಗಳಿಂದಲೂ ನಮ್ಮ ಪೂರ್ವಜರು ಸಾಮುದಾಯಿಕ ವೌಲ್ಯ, ಅಹಿಂಸೆ, ಪರಸ್ಪರ ಗೌರವಿಸುವ ಮನೋಭಾವನೆಯನ್ನು ನಮಗೆ ಕೊಡುಗೆಯಾಗಿ ನೀಡಿದ್ದಾರೆ. ‘ಅಹಿಂಸೋ ಪರಮೋ ಧರ್ಮ’ ಎಂಬುದೇ ನಮ್ಮ ನಾಡಿದ ಧ್ಯೇಯವಾಕ್ಯವಾಗಿದೆ ಎಂದರು.

ಗಾಂಧೀ ಜಯಂತಿ ಆಚರಣೆಗೆ ಪೂರ್ವಭಾವಿಯಾಗಿ ‘ ಸ್ವಚ್ಛತಾ ಕಾರ್ಯ ಒಂದು ಸೇವೆ’ ಎಂಬ ಅಭಿಯಾನದಲ್ಲಿ ತೊಡಗುವಂತೆ ಜನತೆಗೆ ಕರೆ ನೀಡಿದ ಅವರು, ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಜನತೆ ‘ಪರಿವರ್ತನೆಗಾಗಿ ಕಲಿಸು, ಸಶಕ್ತತೆಗೆ ಶಿಕ್ಷಣ ನೀಡು, ಮುನ್ನಡೆಸಲು ಕಲಿ’ ಎಂಬ ಸಂಕಲ್ಪ ಕೈಗೊಳ್ಳಬೇಕು ಎಂದರು.

 ಜಮೀಯತ್-ಉಲೆಮ-ಇ- ಹಿಂದ್ ಸಂಘಟನೆಯಡಿ ಮುಸ್ಲಿಮರು ಇತ್ತೀಚೆಗೆ 22 ದೇವಸ್ಥಾನ ಹಾಗೂ ಎರಡು ಮಸೀದಿಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದರಲ್ಲದೆ, ಗುಜರಾತ್‌ನ ನೆರೆಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News