ಯೋಧರನ್ನು ಸಾಗಿಸುತ್ತಿದ್ದ ರೈಲಿನಿಂದ ಹೊಗೆಬಾಂಬ್‌ಗಳ ಪೆಟ್ಟಿಗೆ ಕಳ್ಳತನ
ಝಾನ್ಸಿ,ಆ.28: ಸೇನೆಯ ಯೋಧರನ್ನು ಸಾಗಿಸುತ್ತಿದ್ದ ವಿಶೇಷ ರೈಲಿನಿಂದ ಹೊಗೆ ಬಾಂಬ್‌ಗಳು ತುಂಬಿದ್ದ ಪೆಟ್ಟಿಗೆಯೊಂದು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಪುಲ್ಗಾಂವ್‌ನಿಂದ ಪಂಜಾಬ್‌ನ ಪಠಾಣ್‌ಕೋಟ್‌ಗೆ ತೆರಳುತ್ತಿದ್ದ ವಿಶೇಷ ರೈಲು ರವಿವಾರ ಝಾನ್ಸಿ ನಿಲ್ದಾಣದ ಹೊರಗೆ ನಿಲುಗಡೆಯಾಗಿದ್ದಾಗ, ಅದರ ಒಂದು ಬೋಗಿಯ ಬೀಗವನ್ನು ಒಡೆದಿದ್ದನ್ನು ಸೇನಾ ಸಿಬ್ಬಂದಿಗಳು ಗಮನಿಸಿದ್ದರು. ಪರಿಶೀಲಿಸಿದಾಗ ಅದರಲ್ಲಿದ್ದ ಹೊಗೆಬಾಂಬ್‌ಗಳ ಪೆಟ್ಟಿಗೆಯೊಂದು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.
ಸರಕಾರಿ ರೈಲ್ವೆ ಪೊಲೀಸರ(ಜಿಆರ್‌ಪಿ) ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ.
ಮಧ್ಯಪ್ರದೇಶದ ಬಿನಾ ಮತ್ತು ಝಾನ್ಸಿ ನಿಲ್ದಾಣಗಳ ನಡುವಿನ ದೂರವನ್ನು ಕ್ರಮಿಸುತ್ತಿದ್ದಾಗ ರೈಲು ಹಲವಾರು ಬಾರಿ ಅಲ್ಪಾವಧಿ ನಿಲುಗಡೆಯಾಗಿದ್ದು, ಈ ಮಾರ್ಗದಲ್ಲಿಯೇ ಈ ಕಳ್ಳತನ ನಡೆದಿದೆ ಎಂದು ಹೇಳಲಾಗಿದೆ.
ಈ ತಿಂಗಳ ಆರಂಭದಲ್ಲಿ ಬಬಿನಾ ದಂಡುಪ್ರದೇಶದಲ್ಲಿ ಸೇನಾ ಘಟಕಗಳ ಚಲನ ವಲನಗಳ ಬಗ್ಗೆ ತನ್ನನ್ನು ‘ಮೇಜರ್ ಯಾದವ’ ಎಂದು ಗುರುತಿಸಿಕೊಂಡಿದ್ದ ನಿಗೂಢ ವ್ಯಕ್ತಿಗೆ ದೂರವಾಣಿ ಮೂಲಕ ವರ್ಗೀಕೃತ ಮಾಹಿತಿಗಳನ್ನು ಪೂರೈಸುತ್ತಿದ್ದ ಆರೋಪದಲ್ಲಿ ಝಾನ್ಸಿ ಜಿಲ್ಲಾಧಿಕಾರಿ ಕಚೇರಿಯ ಶೀಘ್ರ ಲಿಪಿಕಾರ ರಾಘವೇಂದ್ರ ಅಹ್ರಿವಾರ್ ಎಂಬಾತನ ವಿರುದ್ಧ ಉತ್ತರ ಪ್ರದೇಶ ಭಯೋತ್ಪಾದನೆ ನಿಗ್ರಹ ಘಟಕ(ಎಟಿಎಸ್)ವು ಪ್ರಕರಣವನ್ನು ದಾಖಲಿಸಿಕೊಂಡಿತ್ತು. ‘ಮೇಜರ್ ಯಾದವ’ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಏಜೆಂಟ್ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.