ವಿದೇಶಗಳಲ್ಲಿ ಸಂಕಷ್ಟದಲ್ಲಿದ್ದ 80 ಸಾವಿರ ಭಾರತೀಯರನ್ನು ರಕ್ಷಿಸಲಾಗಿದೆ: ಸುಷ್ಮಾ ಸ್ವರಾಜ್
Update: 2017-08-28 18:30 IST
ಹೊಸದಿಲ್ಲಿ, ಆ.28: ವಿವಿಧ ರಾಷ್ಟ್ರಗಳಲ್ಲಿ ಸಂಕಷ್ಟದಲ್ಲಿದ್ದ ಸುಮಾರು 80 ಸಾವಿರ ಭಾರತೀಯರನ್ನು 3 ವರ್ಷಗಳಲ್ಲಿ ರಕ್ಷಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
“ಅಮೆರಿಕ ಹಾಗೂ ಇಸ್ರೇಲ್ ದೇಶಗಳು ತಮ್ಮ ಪ್ರಜೆಗಳು ಎಲ್ಲೇ ಸಂಕಷ್ಟದಲ್ಲಿದ್ದರೂ ತಕ್ಷಣವೇ ನೆರವಿಗೆ ಧಾವಿಸುತ್ತವೆ ಎಂದು ನಾವು ಈ ಹಿಂದೆ ಕೇಳಿದ್ದೇವೆ. 3 ವರ್ಷಗಳ ಅವಧಿಯಲ್ಲಿ 80 ಸಾವಿರ ಭಾರತೀಯರನ್ನು ನಾವು ರಕ್ಷಿಸಿದ್ದೇವೆ ಎಂದು ಹೇಳಲು ಸಂತಸವಾಗುತ್ತಿದೆ” ಎಂದವರು ಹೇಳಿದ್ದಾರೆ.
ದೇಶದ ಮೊದಲ ವಿದೇಶ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರಕಾರವು ಹಲವಾರು ಬದಲಾವಣೆಗಳನ್ನು ತಂದಿದ್ದರ ಫಲವಾಗಿ ದೇಶವು ಇಂದು ವಿಶ್ವದಲ್ಲೇ ಪ್ರಭಾವಶಾಲಿಯಾಗಿ ಬೆಳೆದಿದೆ. 2014ರವರೆಗೆ ದೇಶದಲ್ಲಿ ಕೇವಲ 77 ಪಾಸ್ ಪೋರ್ಟ್ ಕೇಂದ್ರಗಳು ಕಾರ್ಯಾಚರಿಸುತ್ತಿದ್ದವು. ಈಗ 251 ಕೇಂದ್ರಗಳಿವೆ” ಎಂದರು.