ಬ್ರಿಟನ್ ಹೆದ್ದಾರಿ ಅಪಘಾತ: 8ಮಂದಿ ಮೃತ್ಯು

Update: 2017-08-28 16:28 GMT

ಲಂಡನ್, ಆ. 28: ದಕ್ಷಿಣ ಇಂಗ್ಲೆಂಡ್‌ನ ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ಸಂಭವಿಸಿದ ಭೀಕರ ಅಪಘಾತವೊಂದರಲ್ಲಿ ವಿಪ್ರೊ ಕಂಪೆನಿಯಲ್ಲಿ ಕೆಲಸ ಮಾಡುವ ಮೂವರು ಭಾರತೀಯರು ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದಾರೆ.

ಭಾರತೀಯರು ಸೇರಿದಂತೆ ಇತರರು ಪ್ರಯಾಣಿಸುತ್ತಿದ್ದ ಮಿನಿ ಬಸ್ ಎರಡು ಟ್ರಕ್‌ಗಳ ನಡುವೆ ಸಿಲುಕಿ ಅಪ್ಪಚ್ಚಿಯಾಯಿತು.

ಐದು ವರ್ಷದ ಬಾಲಕಿ ಸೇರಿದಂತೆ ಮೂವರು ಪ್ರಯಾಣಿಕರು ಗಂಭೀರ ಗಾಯಗೊಂಡು ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ.

ಅಪಾಯಕಾರಿ ಚಾಲನೆಯ ಮೂಲಕ ಜನರ ಸಾವಿಗೆ ಕಾರಣವಾದ ಆರೋಪಗಳನ್ನು ಎರಡು ಲಾರಿಗಳ ಚಾಲಕರ ಮೇಲೆ ಹೊರಿಸಲಾಗಿದೆ.

ಮೃತಪಟ್ಟ ಮೂವರು ಭಾರತೀಯರು ನಾಟಿಂಗ್‌ಹ್ಯಾಮ್‌ನಲ್ಲಿರುವ ‘ಕ್ಯಾಪಿಟಲ್ ವನ್’ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ವಿಪ್ರೊ ಪರವಾಗಿ ಗುತ್ತಿಗೆ ಆಧಾರದಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದರು.

ಮೃತ ಭಾರತೀಯರನ್ನು ಕಾರ್ತಿಕೇಯನ್ ರಾಮಸುಬ್ರಮಣ್ಯಂ ಪುಗಲೂರು, ರಿಶಿ ರಾಜೀವ್ ಕುಮಾರ್ ಮತ್ತು ವಿವೇಕ್ ಭಾಸ್ಕರನ್ ಎಂಬುದಾಗಿ ಗುರುತಿಸಲಾಗಿದೆ.

ಇನ್ನೋರ್ವ ವಿಪ್ರೊ ಉದ್ಯೋಗಿ ಮನೊ ರಂಜನ್ ಪನ್ನೀರ್‌ಸೆಲ್ವಂ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಿನಿ ಬಸ್ ಚಾಲಕ, ಭಾರತ ಸಂಜಾತ ಸಿರಿಯಾಕ್ ಜೋಸೆಫ್ ಕೂಡ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News