ಟೆಕ್ಸಾಸ್‌ಗೆ ಅಪ್ಪಳಿಸಿದ ಭೀಕರ ಚಂಡಮಾರುತ

Update: 2017-08-28 16:35 GMT

ಆಸ್ಟಿನ್ (ಟೆಕ್ಸಾಸ್), ಆ. 28: ‘ಹಾರ್ವೆ’ ಚಂಡಮಾರುತದ ಪ್ರಕೋಪಕ್ಕೆ ತುತ್ತಾಗಿರುವ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಹಾಗೂ ಹೂಸ್ಟನ್ ವಿಶ್ವವಿದ್ಯಾನಿಲಯದಲ್ಲಿರುವ ಸುಮಾರು 200 ಭಾರತೀಯ ವಿದ್ಯಾರ್ಥಿಗಳು ನೀರಿನಿಂದ ಸುತ್ತುವರಿಯಲ್ಪಟ್ಟಿದ್ದಾರೆ.

ಟೆಕ್ಸಾಸ್ ರಾಜ್ಯಕ್ಕೆ ಅಪ್ಪಳಿಸಿರುವ ಚಂಡಮಾರುತವು ಭಾರೀ ಪ್ರವಾಹವನ್ನು ಸೃಷ್ಟಿಸಿದೆ ಹಾಗೂ ವಿನಾಶಗಳ ಸರಮಾಲೆಯನ್ನೇ ಉಂಟುಮಾಡಿದೆ. ಚಂಡಮಾರುತದಿಂದಾಗಿ 4.5 ಲಕ್ಷಕ್ಕೂ ಅಧಿಕ ಜನರು ಸಂತ್ರಸ್ತರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘‘ಹೂಸ್ಟನ್ ವಿಶ್ವವಿದ್ಯಾನಿಲಯದಲ್ಲಿರುವ 200 ಭಾರತೀಯ ವಿದ್ಯಾರ್ಥಿಗಳು ಸುತ್ತುವರಿಯಲ್ಪಟ್ಟಿದ್ದಾರೆ. ಅವರು ಕುತ್ತಿಗೆವರೆಗಿನ ನೀರಿನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ನಾವು ಅವರಿಗೆ ಆಹಾರ ವಿತರಿಸಲು ಪ್ರಯತ್ನಗಳನ್ನು ನಡೆಸಿದೆವು. ಆದರೆ, ರಕ್ಷಣಾ ಕಾರ್ಯಾಚರಣೆಗಳಿಗೆ ದೋಣಿಗಳ ಅವಶ್ಯಕತೆಯಿರುವುದರಿಂದ, ಅಮೆರಿಕ ಕೋಸ್ಟ್ ಗಾರ್ಡ್ ನಮಗೆ ಅದಕ್ಕೆ ಅವಕಾಶ ನೀಡಿಲ್ಲ’’ ಎಂಬುದಾಗಿ ಹೂಸ್ಟನ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ತನಗೆ ಮಾಹಿತಿ ನೀಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಸೋಮವಾರ ಟ್ವೀಟ್ ಮಾಡಿದ್ದಾರೆ.

ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಅಸ್ವಸ್ಥರಾಗಿದ್ದಾರೆ ಹಾಗೂ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.

ವಿಶ್ವವಿದ್ಯಾನಿಲಯದಲ್ಲಿರುವ ವಿದ್ಯಾರ್ಥಿಗಳನ್ನು ಸಂಪರ್ಕಿಸಲಾಗಿದ್ದು, ಅವರನ್ನು ಮಂಗಳವಾರದ ವೇಳೆಗೆ ಸ್ಥಳಾಂತರಿಸಲಾಗುವುದು ಎಂದು ಹೂಸ್ಟನ್ ಕಾನ್ಸುಲ್ ಜನರಲ್ ಅನುಪಮ್ ರೇ ಫೇಸ್‌ಬುಕ್‌ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News