×
Ad

ಮ್ಯಾನ್ಮಾರ್‌ನಿಂದ ಬಾಂಗ್ಲಾಕ್ಕೆ ರೊಹಿಂಗ್ಯರ ಪಲಾಯನ

Update: 2017-08-29 22:51 IST

ಕಾಕ್ಸ್‌ಬಝಾರ್ (ಬಾಂಗ್ಲಾದೇಶ), ಆ. 29: ಮ್ಯಾನ್ಮಾರ್‌ನಲ್ಲಿ ಸೇನೆ ನಡೆಸುತ್ತಿರುವ ಹಿಂಸಾಚಾರಕ್ಕೆ ಬೆದರಿ ಬಾಂಗ್ಲಾದೇಶಕ್ಕೆ ಪಲಾಯನಗೈಯುತ್ತಿರುವ ರೊಹಿಂಗ್ಯ ಮುಸ್ಲಿಮರನ್ನು ಬಾಂಗ್ಲಾದೇಶದ ಅಧಿಕಾರಿಗಳು ವಾಪಸ್ ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ನಿರಾಶ್ರಿತರು ವಾಸಿಸಲು ಅವಕಾಶ ಕೊಡಿ ಎಂಬ ವಿಶ್ವಸಂಸ್ಥೆಯ ಮನವಿಯ ಹೊರತಾಗಿಯೂ ಬಾಂಗ್ಲಾ ಅಧಿಕಾರಿಗಳು ತಮ್ಮ ಹೊರದಬ್ಬುವ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ ಎನ್ನಲಾಗಿದೆ. ಅದೇ ವೇಳೆ, ರೊಹಿಂಗ್ಯರು ದಿನೇ ದಿನೇ ಅನಾರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಭದ್ರತಾ ಪಡೆಗಳ ಮೇಲೆ ರೊಹಿಂಗ್ಯ ಬಂಡುಕೋರರು ಶುಕ್ರವಾರ ನಡೆಸಿದ್ದಾರೆನ್ನಲಾದ ಸರಣಿ ದಾಳಿಗಳ ಬಳಿಕ, ಮ್ಯಾನ್ಮಾರ್ ಪಡೆಗಳು ದಮನ ಕಾರ್ಯಾಚರಣೆ ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ರೊಹಿಂಗ್ಯ ಗ್ರಾಮಸ್ಥರು ಸಾಲು ಸಾಲಾಗಿ ಬಾಂಗ್ಲಾದೇಶಕ್ಕೆ ಪಲಾಯನಗೈಯುತ್ತಿದ್ದಾರೆ.

ಅದೇ ವೇಳೆ, ರಖೈನ್ ರಾಜ್ಯದ ಸಂಘರ್ಷಪೀಡಿತ ಪ್ರದೇಶದಿಂದ ಸಾವಿರಾರು ಬೌದ್ಧ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.
ಮ್ಯಾನ್ಮಾರ್‌ನಲ್ಲಿ ನಡೆದ ಸಂಘರ್ಷದಲ್ಲಿ ಕನಿಷ್ಠ 109 ಮಂದಿ ಮೃತಪಟ್ಟಿದ್ದಾರೆ. ಅವರ ಪೈಕಿ ಹೆಚ್ಚಿನವರು ಬಂಡುಕೋರರು. ಆದರೆ, ಮೃತರಲ್ಲಿ ಭದ್ರತಾ ಪಡೆಗಳ ಸದಸ್ಯರು ಮತ್ತು ನಾಗರಿಕರೂ ಇದ್ದಾರೆ.

1990ರ ದಶಕದ ಆದಿ ಭಾಗದಿಂದಲೇ ಮ್ಯಾನ್ಮಾರ್‌ನಲ್ಲಿ ಹಿಂಸೆಗೆ ಬೆದರಿ ರೊಹಿಂಗ್ಯರು ಬಾಂಗ್ಲಾದೇಶಕ್ಕೆ ಪಲಾಯನಗೈಯುತ್ತಿದ್ದು, ದೇಶದಲ್ಲಿ ಈಗಾಗಲೇ 4 ಲಕ್ಷಕ್ಕೂ ಅಧಿಕ ರೊಹಿಂಗ್ಯರು ಇದ್ದಾರೆ.

ಇನ್ನೂ ಹೆಚ್ಚಿನ ನಿರಾಶ್ರಿತರನ್ನು ಸ್ವೀಕರಿಸಲು ತನಗೆ ಸಾಧ್ಯವಿಲ್ಲ ಎಂದು ಬಾಂಗ್ಲಾದೇಶ ಹೇಳುತ್ತಿದೆ.

ಬಾಂಗ್ಲಾದೇಶದ ಗಡಿ ಭದ್ರತಾ ಸೈನಿಕರು ಗಡಿ ದಾಟಿ ಒಳಬರುವ ರೊಹಿಂಗ್ಯರನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ ಹಾಗೂ ಗಡಿ ದಾಟಿ ಬರುವವರನ್ನು ಸುತ್ತುವರಿದು ವಾಪಸ್ ಕಳುಹಿಸುತ್ತಿದ್ದಾರೆ.

ಕಾಯಿಲೆಯಿಂದ 6 ರೊಹಿಂಗ್ಯರು ಸಾವು

ಕಳೆದ ಕೆಲವು ದಿನಗಳಲ್ಲಿ ಸುಮಾರು 5,000 ರೊಹಿಂಗ್ಯರು ಗಡಿ ದಾಟಿ ಬಾಂಗ್ಲಾದೇಶಕ್ಕೆ ಬಂದಿದ್ದಾರೆ ಎಂದು ಅಂದಾಜಿಸಲಾಗಿದೆ. ಅವರ ಪೈಕಿ ಹೆಚ್ಚಿನವರು ರಾತ್ರಿ ವೇಳೆ ಗುಮ್‌ದೂಮ್ ಗ್ರಾಮದ ಸಮೀಪದ ಭೂಗಡಿಯ ಮೂಲಕ ನುಸುಳಿ ಬಂದಿದ್ದಾರೆ.

ಅವರ ಪೈಕಿ ಹೆಚ್ಚಿನವರು ಕಾಯಿಲೆಪೀಡಿತರಾಗಿದ್ದಾರೆ ಹಾಗೂ ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ. ವೈದ್ಯಕೀಯ ಚಿಕಿತ್ಸೆ ಪಡೆಯಲು ಹೋದರೆ, ತಮ್ಮನ್ನು ಹಿಡಿದು ವಾಪಸ್ ಕಳುಹಿಸಬಹುದು ಎನ್ನುವ ಭೀತಿಯಲ್ಲಿ, ಕೆಲವು ನಿರಾಶ್ರಿತರು ಚಿಕಿತ್ಸೆ ಪಡೆಯಲು ಹೋಗಿಲ್ಲ ಎಂದು ನೆರವು ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News