×
Ad

ಟೆಕ್ಸಾಸ್: ನಿಲ್ಲದ ಮಳೆ; ಸಾವಿರಾರು ಜನರ ಸ್ಥಳಾಂತರ

Update: 2017-08-29 22:54 IST

ಹ್ಯೂಸ್ಟನ್, ಆ. 29: ಸತತ ನಾಲ್ಕನೆ ದಿನವಾದ ಸೋಮವಾರವೂ ಅಮೆರಿಕಕ ಕೊಲ್ಲಿ ಕರಾವಳಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರವಾಹ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆಯಿದೆ.

‘ಹಾರ್ವೆ’ ‘ಪ್ರ’ಚಂಡಮಾರುತ ಸೃಷ್ಟಿಸಿರುವ ಪ್ರವಾಹ ಭೀತಿಯಿಂದ ಸಾವಿರಾರು ಮಂದಿ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಹೋಗಬೇಕಾಗಬಹುದು ಎಂಬ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ. ಈ ನಡುವೆ, ಟೆಕ್ಸಾಸ್ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ ಒಂಭತ್ತಕ್ಕೇರಿದೆ.

ಅಮೆರಿಕದ ನಾಲ್ಕನೆ ಅತಿ ದೊಡ್ಡ ನಗರ ಹ್ಯೂಸ್ಟನ್‌ನಲ್ಲಿ ಮತ್ತು ಸುತ್ತಮುತ್ತ ಸಿಕ್ಕಿಹಾಕಿಕೊಂಡಿರುವ ನೂರಾರು ಜನರನ್ನು ರಕ್ಷಿಸಲು ನ್ಯಾಶನಲ್ ಗಾರ್ಡ್ ಸೈನಿಕರು, ಪೊಲೀಸ್ ಅಧಿಕಾರಿಗಳು, ರಕ್ಷಣಾ ಕಾರ್ಯಕರ್ತರು ಮತ್ತು ನಾಗರಿಕರು ಹೆಲಿಕಾಪ್ಟರ್‌ಗಳು, ದೋಣಿಗಳು ಮತ್ತು ವಿಶೇಷ ಹೈ-ವಾಟರ್ ಟ್ರಕ್‌ಗಳೊಂದಿಗೆ ಕಾರ್ಯಾಚರಣೆಗೆ ಇಳಿದಿದ್ದಾರೆ.

50 ವರ್ಷಗಳ ಇತಿಹಾಸದಲ್ಲೇ ಟೆಕ್ಸಾಸ್‌ಗೆ ಅಪ್ಪಳಿಸಿದ ಅತಿ ಪ್ರಬಲ ಚಂಡಮಾರುತ ಇದಾಗಿದೆ. ಚಂಡಮಾರುತವು ಹ್ಯೂಸ್ಟನ್‌ನ ದಕ್ಷಿಣಕ್ಕೆ 354 ಕಿ.ಮೀ. ದೂರದಲ್ಲಿರುವ ಕಾರ್ಪಸ್ ಕ್ರಿಸ್ಟಿಯ ಸಮೀಪ ಶುಕ್ರವಾರ ನೆಲಕ್ಕಪ್ಪಳಿಸಿದೆ.

2005ರಲ್ಲಿ ಅಮೆರಿಕಕ್ಕೆ ಅಪ್ಪಳಿಸಿದ ‘ಕತ್ರಿನಾ’ ಚಂಡಮಾರುತ ಸೃಷ್ಟಿಸಿದ ರಾದ್ಧಾಂತಗಳನ್ನು ‘ಹಾರ್ವೆ’ ಚಂಡಮಾರುತ ನೆನಪಿಸಿದೆ.

ಮುಚ್ಚಿದ ವಿಮಾನ ನಿಲ್ದಾಣಗಳು, ಹೆದ್ದಾರಿಗಳು

 ಹ್ಯೂಸ್ಟನ್‌ನ ಪ್ರಮುಖ ಎರಡೂ ವಿಮಾನ ನಿಲ್ದಾಣಗಳು ಮುಚ್ಚಿವೆ. ಹೆಚ್ಚಿನ ರಾಷ್ಟ್ರೀಯ ಹೆದ್ದಾರಿಗಳು, ರೈಲು ಹಳಿಗಳು ಮತ್ತು ಒಂದು ಆಸ್ಪತ್ರೆ ಮುಚ್ಚಿವೆ. ಕಳೆದ ವಾರಾಂತ್ಯದಲ್ಲಿ ರೋಗಿಗಳನ್ನು ಇಲ್ಲಿಂದ ಸ್ಥಳಾಂತರಿಸಲಾಗಿತ್ತು.

ಸೋಮವಾರ ಸಂಜೆಯ ಹೊತ್ತಿಗೆ ಟೆಕ್ಸಾಸ್‌ನ ಆಗ್ನೇಯ ತುದಿಯಲ್ಲಿ ಸುಮಾರು 2.67 ನಿವಾಸಿಗಳು ವಿದ್ಯುತ್‌ನಿಂದ ವಂಚಿತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News