ಕಸ್ಟಡಿ ಸಾವು ಪ್ರಕರಣ: ಪೊಲೀಸ್ ಅಧಿಕಾರಿ ಬಂಧನ
ಹೊಸದಿಲ್ಲಿ, ಆ.29: ಶಾಲಾ ಬಾಲಕಿಯೋರ್ವಳನ್ನು ಅತ್ಯಾಚಾರ ಎಸಗಿದ ಆರೋಪದಲ್ಲಿ ಬಂಧನದಲ್ಲಿದ್ದ ಆರೋಪಿಯೋರ್ವ ಕಸ್ಟಡಿಯಲ್ಲಿ ಸಾವನ್ನಪ್ಪಿದ ಪ್ರಕರಣ ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಉನ್ನತ ಅಧಿಕಾರಿಯೂ ಸೇರಿದಂತೆ ಎಂಟು ಪೊಲೀಸರನ್ನು ಬಂಧಿಸಲಾಗಿದೆ.
ಜುಲೈ 4ರಿಂದ ನಾಪತ್ತೆಯಾಗಿದ್ದ ಶಾಲಾ ಬಾಲಕಿ, ಎರಡು ದಿನದ ಬಳಿಕ ಶವವಾಗಿ ಪತ್ತೆಯಾಗಿದ್ದಳು. ಬಾಲಕಿಯನ್ನು ಅತ್ಯಾಚಾರ ಎಸಗಿ ಕೊಲೆಗೈದಿರುವುದಾಗಿ ಪೊಲೀಸರು ತಿಳಿಸಿದ್ದು ಪ್ರಕರಣದ ಬಗ್ಗೆ ರಾಜ್ಯದಲ್ಲಿ ಭಾರೀ ಪ್ರತಿಭಟನೆ ನಡೆದಿದ್ದು ಆರೋಪಿಗಳ ಪತ್ತೆಗಾಗಿ ಉನ್ನತ ಪೊಲೀಸ್ ಅಧಿಕಾರಿ ಝಹುರ್ ಹೈದರ್ ಝೈದಿ ನೇತೃತ್ವದಲ್ಲಿ ತಂಡವೊಂದನ್ನು ರಚಿಸಲಾಗಿತ್ತು. ಈ ತಂಡ ಆರು ಆರೋಪಿಗಳನ್ನು ಬಂಧಿಸಿತ್ತಾದರೂ, ನೈಜ ಆರೋಪಿಯನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ಆರೋಪ ಕೇಳಿ ಬಂದಿತ್ತು.
ಈ ಮಧ್ಯೆ ಬಂಧಿತ ಆರು ಮಂದಿಯಲ್ಲಿ ಸೂರಜ್ ಸಿಂಗ್ ಎಂಬಾತ ಕಸ್ಟಡಿಯಲ್ಲಿ ಮೃತಪಟ್ಟಿದ್ದು ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದಾಗ ನ್ಯಾಯಾಲಯ ಸಿಬಿಐ ತನಿಖೆಗೆ ಆದೇಶಿಸಿತ್ತು.
ತನಿಖೆ ನಡೆಸಿದ ಸಿಬಿಐ, ಹಿ.ಪ್ರದೇಶ (ದಕ್ಷಿಣ)ದ ಐಜಿಪಿ ಝಹುರ್ ಝೈದಿ, ಡಿಎಸ್ಪಿ ಮನೋಜ್ ಜೋಷಿ ಹಾಗೂ ಇತರ ಆರು ಪೊಲೀಸರನ್ನು ಬಂಧಿಸಿದೆ. ರಾಜಿಂದರ್ ಸಿಂಗ್ ಎಂಬಾತ ಬಾಲಕಿಯನ್ನು ಅತ್ಯಾಚಾರ ಎಸಗಿ ಕೊಲೆಗೈದಿದ್ದು ಈತನನ್ನು ಇತರ ಐವರು ಆರೋಪಿಗಳ ಸಹಿತ ಬಂಧಿಸಲಾಗಿದೆ. ಆದರೆ ಈತ ಸಹ ಖೈದಿ ಸೂರಜ್ ಸಿಂಗ್ ಎಂಬಾತನ ತಲೆಯನ್ನು ಜೈಲಿನ ಗೋಡೆಗೆ ಅಪ್ಪಳಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ.