ಡೋಕಾ ಲಾ ಬಿಕ್ಕಟ್ಟಿನಿಂದ ಭಾರತ ಪಾಠ ಕಲಿಯಲಿ: ಚೀನಾ

Update: 2017-08-30 16:44 GMT

ಬೀಜಿಂಗ್, ಆ. 30: ಡೋಕಾ ಲಾ ಬಿಕ್ಕಟ್ಟಿನಿಂದ ಭಾರತ ಪಾಠ ಕಲಿಯಬೇಕು ಹಾಗೂ ಮುಂದೆ ಇಂಥ ಘಟನೆಗಳು ನಡೆಯುವುದನ್ನು ನಿವಾರಿಸಬೇಕು ಎಂದು ಚೀನಾ ಬುಧವಾರ ಹೇಳಿದೆ.

ಸಿಕ್ಕಿಂ ವಲಯದಲ್ಲಿರುವ ಭಾರತ ಮತ್ತು ಚೀನಾಗಳ ಗಡಿಯಲ್ಲಿ ಉಭಯ ದೇಶಗಳ ಸೈನಿಕರ ನಡುವಿನ 70 ದಿನಗಳ ಬಿಕ್ಕಟ್ಟು ಪರಿಹಾರಗೊಂಡ ಎರಡು ದಿನಗಳ ಬಳಿಕ ಚೀನಾ ಈ ಹೇಳಿಕೆ ನೀಡಿದೆ.

‘‘ಈ ಘಟನೆಯಿಂದ ಭಾರತ ಪಾಠ ಕಲಿತುಕೊಂಡಿದೆ ಹಾಗೂ ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ನಡೆಯದಂತೆ ಅದು ನೋಡಿಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ’’ ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಚೀನ ವಿದೇಶ ಸಚಿವ ವಾಂಗ್ ಯಿ ಹೇಳಿದರು.

ಮುಂದಿನ ವಾರ ನಡೆಯಲಿರುವ ‘ಬ್ರಿಕ್ಸ್’ (ಬ್ರೆಝಿಲ್, ರಶ್ಯ, ಭಾರತ, ಚೀನಾ, ದಕ್ಷಿನ ಆಫ್ರಿಕ ದೇಶಗಳನ್ನೊಳಗೊಂಡ ಗುಂಪು) ಶೃಂಗ ಸಮ್ಮೇಳನದ ಬಗ್ಗೆ ವಿವರಣೆ ನೀಡಲು ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ವಾಂಗ್ ಈ ಹೇಳಿಕೆ ನೀಡಿದರು.

ಫುಜಿಯನ್ ಪ್ರಾಂತದ ಕರಾವಳಿ ನಗರ ಕ್ಸಿಯಾಮೆನ್‌ನಲ್ಲಿ ಸೆಪ್ಟಂಬರ್ 3ರಿಂದ 5ರವರೆಗೆ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆಯನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ವಹಿಸಲಿದ್ದಾರೆ. ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.

ಚೀನಾಕ್ಕೆ ಮುಖಭಂಗವನ್ನು ತಪ್ಪಿಸುವುದಕ್ಕಾಗಿ ಡೋಕಾ ಲಾ ಬಿಕ್ಕಟ್ಟಿಗೆ ಪರಿಹಾರವೊಂದನ್ನು ರೂಪಿಸಲಾಯಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವಾಸ್ತವ ಸಂಗತಿಯೆಂದರೆ, ಡೋಕಾ ಲಾದಿಂದ ಭಾರತೀಯ ಪಡೆಗಳು ಹಿಂದಕ್ಕೆ ಸರಿದಿವೆ ಎಂದರು.

ಡೋಕಾಲ ಚೀನಾದ ನಿಯಂತ್ರಣದಲ್ಲಿದೆ, ಆದರೆ ಅದು ತನಗೆ ಸೇರಿದ್ದೆಂದು ಭೂತಾನ್ ಹೇಳಿಕೊಳ್ಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News