×
Ad

ಬಹುಮುಖ್ಯ ವಿವರಗಳೇ ಇಲ್ಲದ ನೋಟು ಅಮಾನ್ಯ ಕುರಿತ ಆರ್‌ಬಿಐ ವರದಿ

Update: 2017-08-30 23:29 IST

ಹೊಸದಿಲ್ಲಿ,ಆ.30: ನೋಟು ಅಮಾನ್ಯ ಕುರಿತು ಆರ್‌ಬಿಐ ಸಲ್ಲಿಸಿರುವ ವರದಿಯಲ್ಲಿ ರದ್ದಾದ ನೋಟುಗಳ ಪ್ರಮಾಣ ಸೇರಿದಂತೆ ಕೆಲವು ಬಹುಮುಖ್ಯ ವಿವರಗಳೇ ಇಲ್ಲ ಎಂದು ಬೊಟ್ಟು ಮಾಡಿರುವ ಹಣಕಾಸು ಕುರಿತ ಸಂಸದೀಯ ಸ್ಥಾಯಿ ಸಮಿತಿಯು, ಕರಡು ವರದಿಯನ್ನು ಮರುರೂಪಿಸುವಂತೆ ಬುಧವಾರ ಅದಕ್ಕೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ವರದಿಯನ್ನು ಮತ್ತೊಮ್ಮೆ ಸಿದ್ಧಗೊಳಿಸುವ ಅಗತ್ಯವಿದೆ ಎಂದು ಸಮಿತಿಯ ಸದಸ್ಯರಾಗಿರುವ ಸಂಸದರು ಪಕ್ಷಭೇದವನ್ನು ಮರೆತು ಹೇಳಿದರೆ, ಕೆಲವು ಸದಸ್ಯರು ವರದಿಯಲ್ಲಿ ಗಮನಾರ್ಹ ಅಂಶಗಳಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ವರದಿ ಸ್ವೀಕಾರವನ್ನು ಸಮಿತಿಯು ಮುಂದೂಡಿತು ಎಂದೂ ಮೂಲಗಳು ತಿಳಿಸಿದವು.

 ಕಾಂಗ್ರೆಸ್ ಸಂಸದ ಎಂ.ವೀರಪ್ಪ ಮೊಯ್ಲಿ ಅವರ ನೇತೃತ್ವದ ಸಮಿತಿಯ ಅಧಿಕಾರಾ ವಧಿಯು ಗುರುವಾರ,ಆ.31ರಂದು ಅಂತ್ಯಗೊಳ್ಳುತ್ತಿದೆ. ಹೀಗಾಗಿ ಸಮಿತಿಯು ಪುನರ್ ರಚನೆಯಾದ ಬಳಿಕವಷ್ಟೇ ನೋಟು ಅಮಾನ್ಯ ಕುರಿತು ಆರ್‌ಬಿಐ ವರದಿ ಸ್ವೀಕೃತವಾಗ ಬಹುದು ಎಂದು ತಿಳಿಸಿದ ಮೂಲಗಳು, ಸಮಿತಿಯ ಸದಸ್ಯರಾಗಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು, ನೋಟು ರದ್ದತಿಯ ಹಿನ್ನೆಲೆಯಲ್ಲಿ ಡಿಜಿಟಲ್ ವ್ಯವಹಾರವನ್ನು ಜನರ ಮೇಲೆ ಹೇರಬಾರದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಎಂದು ಹೇಳಿದವು.

ಆರ್‌ಬಿಐ ಎಲ್ಲ ವಿವರಗಳನ್ನು ಮತ್ತು ಸಮಿತಿಯ ಸದಸ್ಯರು ಕೇಳಿದ್ದ ಪ್ರಶ್ನೆಗಳಿಗೆ ಉತ್ತರಗಳನ್ನು ಒದಗಿಸಿಲ್ಲವಾದ್ದರಿಂದ ವರದಿಯು ಅಪೂರ್ಣವಾಗಿದೆ ಎಂದು ಬಿಜೆಪಿ ಸದಸ್ಯ ನಿಶಿಕಾಂತ ದುಬೆ ಬೆಟ್ಟು ಮಾಡಿದರೆಂದೂ ಮೂಲಗಳು ತಿಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News