ಜಾರ್ಖಂಡ್‌ದಲ್ಲಿ 800ಕ್ಕೂ ಅಧಿಕ ಮಕ್ಕಳನ್ನು ಬಲಿ ಪಡೆದ ಮಿದುಳು ಜ್ವರ,ನ್ಯುಮೋನಿಯಾ

Update: 2017-08-31 13:01 GMT

ರಾಂಚಿ,ಆ.31: ಜಾರ್ಖಂಡ್‌ನ ಎರಡು ಆಸ್ಪತ್ರೆಗಳಲ್ಲಿ 800ಕ್ಕೂ ಅಧಿಕ ಮಕ್ಕಳು ಮೃತಪಟ್ಟಿದ್ದು, ಹೆಚ್ಚಿನ ಸಾವುಗಳು ಮಿದುಳು ಜ್ವರದಿಂದಾಗಿ ಸಂಭವಿಸಿವೆ.

  ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ರಿಮ್ಸ್)ಯಲ್ಲಿ ಪ್ರಸಕ್ತ ವರ್ಷದಲ್ಲಿ ಈವರೆಗೆ 660 ಮತ್ತು ಜಂಷೆಡ್ಪುರದ ಮಹಾತ್ಮಾ ಗಾಂಧಿ ಸ್ಮಾರಕ ಆಸ್ಪತ್ರೆ (ಎಂಜಿಎಂಎಚ್)ಯಲ್ಲಿ ಕಳೆದ ನಾಲ್ಕು ತಿಂಗಳುಗಳಲ್ಲಿ 164 ಮಕ್ಕಳು ಮೃತಪಟ್ಟಿದ್ದಾರೆ.

ಶೇ.51ರಷ್ಟು ಮಕ್ಕಳು ಮಿದುಳು ಜ್ವರದಿಂದ, ಶೇ.17ರಷ್ಟು ಮಕ್ಕಳು ನ್ಯುಮೋನಿಯಾ ದಿಂದ ಮತ್ತು ಉಳಿದ ಮಕ್ಕಳು ಇತರ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಆಗಸ್ಟ್ ತಿಂಗಳೊಂದರಲ್ಲೇ 103 ಮಕ್ಕಳು ಮೃತಪಟ್ಟಿದ್ದಾರೆ ಎಂದು ರಿಮ್ಸ್‌ನ ನಿರ್ದೇಶಕ ಡಾ.ಬಿ.ಎಲ್.ಶೇರ್ವಾಲ್ ತಿಳಿಸಿದರು.

ರಿಮ್ಸ್‌ನಲ್ಲಿ ಕಳೆದ ವರ್ಷ 1,118 ಮಕ್ಕಳು ಮೃತಪಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.

 ಜಾರ್ಖಂಡ್ ಮುಖ್ಯಮಂತ್ರಿ ರಘುವರ ದಾಸ್ ಅವರು ಎಂಜಿಎಂಎಚ್ ಮತ್ತು ಗುಮಿಯಾದ ಸದರ್ ಆಸ್ಪತ್ರೆಯಲ್ಲಿ ಸಂಭವಿಸಿರುವ ಸಾವುಗಳ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಸದರ್ ಆಸ್ಪತ್ರೆಯಲ್ಲಿ ಈ ವರ್ಷ ವೈದ್ಯಕೀಯ ನಿರ್ಲಕ್ಷದಿಂದ ಏಳು ಸಾವುಗಳು ಸಂಭವಿಸಿವೆ.

ಮಕ್ಕಳ ಸಾವುಗಳಿಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾದ ಬಳಿಕ ರಿಮ್ಸ್‌ನ ಅಧೀಕ್ಷಕ ಡಾ.ಎ.ಎಸ್.ಕೆ ಚೌಧರಿ ಅವರನ್ನು ಎತ್ತಂಗಡಿ ಮಾಡಲಾಗಿದೆ.

ಎಂಜಿಎಂಎಚ್‌ನಲ್ಲಿ ಒಂದು ತಿಂಗಳಲ್ಲಿ 52 ಮಕ್ಕಳ ಸಾವುಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಜಾರ್ಖಂಡ್ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಈ ವಿಷಯ ಕುರಿತು ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News