ಬಿಕಾನೇರ್ ಭೂಹಗರಣ ಪ್ರಕರಣ: ವಾದ್ರಾಗೆ ಸೇರಿದ ಸಂಸ್ಥೆಯ ವಿರುದ್ಧ ತನಿಖೆ ಆರಂಭಿಸಿದ ಸಿಬಿಐ
ಹೊಸದಿಲ್ಲಿ, ಆ.31: ರಾಜಸ್ತಾನದ ಬಿಕಾನೇರ್‌ನಲ್ಲಿ ನಡೆದಿದೆ ಎನ್ನಲಾಗಿರುವ ಭೂಹಗರಣಕ್ಕೆ ಸಂಬಂಧಿಸಿದ 18 ಪ್ರಕರಣಗಳ ಬಗ್ಗೆ ತನಿಖೆಯನ್ನು ಸಿಬಿಐ ಬುಧವಾರ ಆರಂಭಿಸಿದೆ. ಇದರಲ್ಲಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾಗೆ ಸೇರಿದ ಸಂಸ್ಥೆಯೂ ಒಳಗೊಂಡಿದೆ .
ಭೂಹಗರಣ ಪ್ರಕರಣದಲ್ಲಿ ರಾಜಸ್ತಾನ ಪೊಲೀಸರು ಈಗಾಗಲೇ ನೋಂದಾಯಿಸಿರುವ ಎಫ್‌ಐಆರ್‌ಗಳನ್ನು ಸಿಬಿಐ ಮರುನೋಂದಾಯಿಸಿಕೊಂಡಿದೆ. ಕೊಲಾಯತ್ ಭೂ ವ್ಯವಹಾರಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಈಗಾಗಲೇ ತನಿಖೆ ಆರಂಭಿಸಿದೆ. ಈ ಹಗರಣದಲ್ಲಿ ವಾದ್ರಾ ಅಥವಾ ಅವರೊಂದಿಗೆ ಸಂಪರ್ಕದಲ್ಲಿರುವ ಇನ್ನಿತರ ಸಂಸ್ಥೆಗಳ ಹೆಸರನ್ನು ಸಿಬಿಐ ಉಲ್ಲೇಖಿಸಿಲ್ಲವಾದರೂ, ಈ ವ್ಯವಹಾರದಲ್ಲಿ ವಾದ್ರಾ ಹೆಸರು ಈ ಹಿಂದೆ ಕೇಳಿಬಂದಿತ್ತು.
ಸೇನೆಯ ಅಭ್ಯಾಸಕ್ಕೆ ಬಳಸಲಾಗುತ್ತಿದ್ದ ಬಿಕಾನೇರ್‌ನ ಮಹಾಜನ್ ಫೀಲ್ಡ್ ಫಯರಿಂಗ್ ರೇಂಜ್ ಪ್ರದೇಶ ತಮಗೆ ಸೇರಿದ್ದೆಂದು ಸುಳ್ಳು ಹೇಳಿ, ಮಾರಾಟ ಮಾಡಿ ವಂಚಿಸಿದ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ. 2014ರ ಆಗಸ್ಟ್- ಸೆಪ್ಟೆಂಬರ್ ಮಧ್ಯೆ ದಾಖಲಿಸಲಾಗಿರುವ 18 ಎಫ್‌ಐಆರ್‌ಗಳಲ್ಲಿ 16ನ್ನು ಗಜ್‌ನೇರ್ ಪೊಲೀಸ್ ಠಾಣೆಯಲ್ಲಿ ಹಾಗೂ ಎರಡನ್ನು ಕೊಲಯತ್ ಠಾಣೆಯಲ್ಲಿ ದಾಖಲಿಸಲಾಗಿದೆ. ಈ ಭೂಹಗರಣ ಆರೋಪದ ತನಿಖೆಯನ್ನು ರಾಜಸ್ತಾನ ಸರಕಾರ ಸಿಬಿಐಗೆ ವಹಿಸಿಕೊಟ್ಟಿದೆ.
18 ಎಫ್‌ಐಆರ್ ದಾಖಲಿಸಲಾಗಿದ್ದು ಇದರಲ್ಲಿ 4 ಎಫ್‌ಐಆರ್‌ಗಳನ್ನು ರಾಬರ್ಟ್ ವಾದ್ರಾ ಜೊತೆ ಸಂಪರ್ಕ ಇರುವ ಸಂಸ್ಥೆಗಳ ವಿರುದ್ಧ ದಾಖಲಿಸಲಾಗಿದೆ . ಒಟ್ಟು 1,400 ಬಿಘ ಜಮೀನು ಖರೀದಿ ಪ್ರಕ್ರಿಯೆಗೆ ಸಂಬಂಧಿಸಿ ಎಫ್‌ಐಆರ್ ದಾಖಲಾಗಿದ್ದು ಇದರಲ್ಲಿ ವಾದ್ರಾ ಸಂಪರ್ಕ ಹೊಂದಿರುವ ಸಂಸ್ಥೆ 275 ಬಿಘ ಜಮೀನು ಖರೀದಿಸಿರುವ ಆರೋಪವಿದೆ ಎಂದು ಆಗಸ್ಟ್ 22ರಂದು ಪ್ರಕರಣವನ್ನು ಸಿಬಿಐಗೆ ವಹಿಸಿದ್ದ ಸಂದರ್ಭ ರಾಜಸ್ತಾನ ಗೃಹ ಸಚಿವ ಗುಲಾಬ್‌ಚಂದ್ ಕತಾರಿಯ ತಿಳಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜಸ್ತಾನ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್, ಬಿಜೆಪಿಯು ರಾಜಕೀಯ ಲಾಭಕ್ಕಾಗಿ ಸಿಬಿಐ, ಜಾರಿ ನಿರ್ದೇಶನಾಲಯ ಮತ್ತಿತರ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಭೂಹಗರಣ ಆರೋಪದ ಬಗ್ಗೆ ತನಿಖೆ ನಡೆಸಲು ಸರಕಾರ ರಚಿಸಿದ್ದ ಸಮಿತಿ ನೀಡಿರುವ ವರದಿಯನ್ನು ರಾಜ್ಯ ಸರಕಾರ ಬಹಿರಂಗಪಡಿಸಿಲ್ಲ. ಅಲ್ಲದೆ ಸಮಿತಿಯನ್ನು ಬರ್ಖಾಸ್ತುಗೊಳಿಸಿಲ್ಲ. ಭೂಹಗರಣಕ್ಕೆ ಸಂಬಂಧಿಸಿ ಬಂಧಿತರಾದ ವ್ಯಕ್ತಿಗಳೆಲ್ಲಾ ಬಿಜೆಪಿ ಜೊತೆ ಸಂಬಂಧ ಇರುವವರು ಎಂದು ತಿಳಿಸಿದ್ದಾರೆ.