×
Ad

ಭಾರತ,ನೇಪಾಳ ಮತ್ತು ಬಾಂಗ್ಲಾದೇಶಗಳಿಗೆ 10 ಲ.ಡಾ.ನೆರೆ ಪರಿಹಾರ ಘೋಷಿಸಿದ ಗೂಗಲ್

Update: 2017-08-31 19:09 IST

ಹೊಸದಿಲ್ಲಿ,ಆ.31: ಭಾರತ, ನೇಪಾಳ ಮತ್ತು ಬಾಂಗ್ಲಾದೇಶಗಳ ನೆರೆಪೀಡಿತ ಪ್ರದೇಶಗಳಿಗೆ 10 ಲ.ಡಾ.ಪರಿಹಾರವನ್ನು ನೀಡುವುದಾಗಿ ಗೂಗಲ್ ಗುರುವಾರ ಪ್ರಕಟಿಸಿದೆ.

ಎನ್‌ಜಿಒಗಳಾದ ‘ಗೂಂಜ್’ ಮತ್ತು ‘ಸೇವ್ ದಿ ಚಿಲ್ಡ್ರನ್’ಗಳ ನೆರೆ ಪರಿಹಾರ ಪ್ರಯತ್ನಗಳಿಗೆ ಗೂಗಲ್ ಡಾಟ್ ಆರ್ಗ್ ಮತ್ತು ಗೂಗಲ್ ಉದ್ಯೋಗಿಗಳಿಂದ ಹತ್ತು ಲ.ಡಾ.ನೀಡಲು ನಾವು ಬದ್ಧರಾಗಿದ್ದೇವೆ ಎಂದು ಗೂಗಲ್‌ನ ಉಪಾಧ್ಯಕ್ಷ (ಆಗ್ನೇಯ ಏಷ್ಯಾ ಮತ್ತು ಭಾರತ) ರಾಜನ್ ಆನಂದನ್ ಅವರು ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಮೂರು ದೇಶಗಳಲ್ಲಿಯ ನೆರೆಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆಗಳಲ್ಲಿ ತೊಡಗಿಕೊಂಡಿರುವ ಸೇವ್ ದಿ ಚಿಲ್ಡ್ರನ್ ಒಟ್ಟು 1,60,000 ಜನರನ್ನು ತಲುಪುವ ಗುರಿಯನ್ನು ಹೊಂದಿದ್ದರೆ, ಗೂಂಜ್ ಗ್ರಾಮೀಣ ಭಾರತದ ಒಂಭತ್ತು ರಾಜ್ಯಗಳಾದ್ಯಂತ 75,000 ನೆರೆ ಸಂತ್ರಸ್ತ ಕುಟುಂಬಗಳಿಗೆ ಆಹಾರ, ಹೊದಿಕೆಗಳಂತಹ ಮೂಲ ಅಗತ್ಯಗಳನ್ನು ಒದಗಿಸಿ ನೆರವಾಗಲು ಶ್ರಮಿಸುತ್ತಿದೆ.

ಉಭಯ ಸಂಸ್ಥೆಗಳು ನೆರೆಪೀಡಿತ ಪ್ರದೇಶಗಳಲ್ಲಿ ಹಾನಿಗೀಡಾಗಿರುವ ರಸ್ತೆಗಳು, ಸೇತುವೆಗಳು ಮತ್ತು ಶಾಲೆಗಳ ದುರಸ್ತಿಗೂ ಮುಂದಾಗಿವೆ.

ತನ್ಮಧ್ಯೆ ಗೂಗಲ್‌ನ ವಿಪತ್ತು ಪ್ರತಿಕ್ರಿಯಾ ತಂಡವು ಈ ಮೂರೂ ದೇಶಗಳ ನೆರೆ ಪೀಡಿತ ಪ್ರದೇಶಗಳಲ್ಲಿ ಎಸ್‌ಒಎಸ್ ಎಚ್ಚರಿಕೆಗಳನ್ನು ಕ್ರಿಯಾಶೀಲಗೊಳಿಸಿದೆ.

ಅಸ್ಸಾಂ ಮತ್ತು ಬಿಹಾರ ಸೇರಿದಂತೆ ಭಾರತದಲ್ಲಿ ಆರು ರಾಜ್ಯಗಳು ನೆರೆ ಪ್ರಕೋಪಕ್ಕೆ ಸಿಲುಕಿವೆ.

ಮಾಹಿ, ಸಾಬರಮತಿ, ಬನಾಸ್ ಮತ್ತು ಅವುಗಳ ಉಪನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಜಲಾಶಯಗಳು ಶೇ.90-94ರಷ್ಟು ಭರ್ತಿಯಾಗಿರುವುದರಿಂದ ರಾಜಸ್ಥಾನ, ಗುಜರಾತ್ ಮತ್ತು ಮಧ್ಯಪ್ರದೇಶಗಳು ನೆರೆ ಭೀತಿಯನ್ನು ಎದುರಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News