ಈ ಸುಡಾನೀ ವೃದ್ಧ ಹಜ್ ಮಾಡಲು ಸೌದಿ ದೊರೆಯ ಅತಿಥಿಯಾಗಿ ಆಯ್ಕೆಯಾಗಿದ್ದು ಹೇಗೆ ?
“ಸೌದಿ ದೊರೆ ಸಲ್ಮಾನ್ ರ ಹಜ್ ಮತ್ತು ಉಮ್ರಾ ಕಾರ್ಯಕ್ರಮದ ಅತಿಥಿಯಾಗಿ ನಿಮ್ಮನ್ನು ಆಹ್ವಾನಿಸಲಾಗಿದೆ” ಎನ್ನುವ ಸುಡಾನೀಸ್ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯದಿಂದ ಬಂದ ಕರೆಯು ತನ್ನ ಏಳು ದಶಕಗಳ ಜೀವನದಲ್ಲೇ ಮರೆಯಲಾಗದ್ದು ಎನ್ನುತ್ತಾರೆ ಸುಡಾನಿ ಪ್ರಜೆ ಫದ್ಲುಲ್ಲಾ ಅಮ್ರ್.
ಆದರೆ ಈ ಆಹ್ವಾನದ ಹಿಂದೆ ಯೋಧನೊಬ್ಬನ ತ್ಯಾಗವಿತ್ತು. ಅಮ್ರ್ ಅವರ ಪುತ್ರ ಅಲ್ ನೂರೈನ್ ಸುಡಾನಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದರು. ಹೌತಿ ಮತ್ತು ಸಾಲೆಹ್ ಬಂಡಿಕೋರರ ವಿರುದ್ಧ ನಡೆದ ಸುಡಾನಿ ಸೇನೆಯ ಕಾರ್ಯಾಚರಣೆಯ ವೇಳೆ ಅವರು ಹುತಾತ್ಮರಾಗಿದ್ದರು. ಯೆಮೆನ್ ನಲ್ಲಿ ಬಂಡುಕೋರರ ವಿರುದ್ಧದ ಕಾರ್ಯಾಚರಣೆಯಲ್ಲಿ ಮೃತಪಟ್ಟ ಯೋಧರ ಸೈನಿಕರ ಸೇವೆಗೆ ಕೃತಜ್ಞತೆ ಹಾಗು ಗೌರವ ಸಲ್ಲಿಸುವ ಸಲುವಾಗಿ ಅವರ ಕುಟುಂಬಸ್ಥರನ್ನು ಹಜ್ ಯಾತ್ರೆಗಾಗಿ ಕರೆಸುವ ಯೋಜನೆಯನ್ನು ಸೌದಿ ದೊರೆ ಸಲ್ಮಾನ್ ಅದಾಗಲೇ ಘೋಷಿಸಿದ್ದರು.
ನೂರೈನ್ ಸುಮಾರು 17 ವರ್ಷಗಳ ಕಾಲ ಸುಡಾನಿ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಯೆಮೆನ್ ಸೇವೆ ಸಲ್ಲಿಸುವುದಕ್ಕಾಗಿ ಅವರನ್ನು ಆಯ್ಕೆ ಮಾಡಲಾಗಿತ್ತು. ಪ್ರತಿ ವಾರ ಅವರು ಮನೆಗೆ ಕರೆ ಮಾಡಿ ಕುಟುಂಬ ಸದಸ್ಯರೊಡನೆ ಮಾತನಾಡುತ್ತಿದ್ದರು ಎಂದು ಹೇಳುತ್ತಾರೆ ಅಮ್ರ್,
ತನ್ನ ಪುತ್ರನ ಜೊತೆ ಮಾತನಾಡಿದ್ದ ಕೊನೆಯ ಕರೆಯನ್ನು ಅವರು ನೆನಪಿಸಿಕೊಳ್ಳುತ್ತಾರೆ. “ಅದೊಂದು ಆಶ್ಚರ್ಯಕಾರಿ ಕರೆಯಾಗಿತ್ತು. ಏಕೆಂದರೆ ಕೊನೆಯ ಬಾರಿ ಮಾತನಾಡಿದ್ದ ನನ್ನ ಪುತ್ರ ಎಲ್ಲವೂ ತಿಳಿದಿದ್ದಂತೆ ನೀವು ಈ ಬಾರಿ ಹಜ್ ಯಾತ್ರೆ ಕೈಗೊಳ್ಳುತ್ತೀರಿ ಎಂದಿದ್ದ. ಮರುದಿನ ನನ್ನ ಪುತ್ರ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದಾನೆ ಎನ್ನುವ ಮಾಹಿತಿ ಲಭಿಸಿತ್ತು. ಶತ್ರುಗಳೊಂದಿಗೆ ಹೋರಾಡಿ ವೀರ ಮರಣವನ್ನಪ್ಪಿದ ನನ್ನ ಪುತ್ರನ ಬಗ್ಗೆ ಹೆಮ್ಮೆ ಪಡುತ್ತೇನೆ” ಎನ್ನುತ್ತಾರೆ ಅಮ್ರ್.