ಲೂಸಿಯಾನಕ್ಕೆ ಕಾಲಿಟ್ಟ ‘ಹಾರ್ವೆ’
ಹ್ಯೂಸ್ಟನ್, ಆ. 31: ಅಮೆರಿಕದ ಟೆಕ್ಸಾಸ್‌ನಲ್ಲಿ ಭಾರೀ ದಾಂಧಲೆ ನಡೆಸಿದ ಚಂಡಮಾರುತ ‘ಹಾರ್ವೆ’ ಬುಧವಾರ ಲೂಸಿಯಾನಕ್ಕೆ ಕಾಲಿಟ್ಟಿದೆ. ಚಂಡಮಾರುತದ ಪ್ರಭಾವದಿಂದಾಗಿ ಅಲ್ಲಿ ಭಾರೀ ಮಳೆಯಾಗುತ್ತಿದೆ.
ಇದಕ್ಕೂ ಮುನ್ನ ಟೆಕ್ಸಾಸ್‌ನಲ್ಲಿ ದಾಖಲೆಯ ಮಳೆಯಾಗಿದ್ದು, ಭೀಕರ ಪ್ರವಾಹದಿಂದಾಗಿ ಕನಿಷ್ಠ 35 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಸಾವಿರಾರು ಮಂದಿ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಹೋಗಿದ್ದಾರೆ.
ಅರ್ಧ ಶತಮಾನದ ಅವಧಿಯಲ್ಲಿ ಟೆಕ್ಸಾಸ್‌ಗೆ ಅಪ್ಪಳಿಸಿದ ಅತಿ ಭೀಕರ ಚಂಡಮಾರುತ ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಳೆದ ಶುಕ್ರವಾರ ಚಂಡಮಾರುತ ಅಪ್ಪಳಿಸಿದಂದಿನಿಂದ 32,000ಕ್ಕೂ ಅಧಿಕ ಮಂದಿ ತಮ್ಮ ಮನೆಗಳನ್ನು ತೊರೆದು ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.
ಹಾರ್ವೆ ಚಂಡಮಾರುತವು ಬುಧವಾರ ರಾತ್ರಿಯ ವೇಳೆಗೆ ವಾಯುಭಾರ ಕುಸಿತದ ಮಟ್ಟಕ್ಕೆ ದುರ್ಬಲಗೊಂಡಿದೆ ಎಂದು ಅಮೆರಿಕ ರಾಷ್ಟ್ರೀಯ ಚಂಡಮಾರುತ ಕೇಂದ್ರ ತಿಳಿಸಿದೆ.
ಈ ನಡುವೆ, 17 ಮಂದಿ ನಾಪತ್ತೆಯಾಗಿದ್ದಾರೆ ಎಂದು ಹ್ಯಾರಿಸ್ ಕೌಂಟಿ ಪೊಲೀಸರು ಹೇಳಿದ್ದಾರೆ. ಹ್ಯಾರಿಸ್ ಕೌಂಟಿ ವ್ಯಾಪ್ತಿಯಲ್ಲಿ ಹ್ಯೂಸ್ಟನ್ ಬರುತ್ತದೆ.
ಮೃತ ತಾಯಿಯ ಬೆನ್ನಿಗೆ ಅಂಟಿಕೊಂಡಿದ್ದ 3 ವರ್ಷದ ಮಗು
ಆಗ್ನೇಯ ಟೆಕ್ಸಾಸ್‌ನ ಕಾಲುವೆಯೊಂದರಲ್ಲಿ ಮೂರು ವರ್ಷದ ಹೆಣ್ಣು ಮಗುವೊಂದು ತನ್ನ ಮೃತ ತಾಯಿಯ ದೇಹವನ್ನು ಹಿಡಿದುಕೊಂಡು ತೇಲುತ್ತಿದ್ದ ಘಟನೆಯೊಂದು ವರದಿಯಾಗಿದೆ. ಮಗುವನ್ನು ಪೊಲೀಸರು ರಕ್ಷಿಸಿದ್ದಾರೆ.
ಮಗು ತನ್ನ ತಾಯಿಯ ಬೆನ್ನಿನಲ್ಲಿ ಕುಳಿತು ತೇಲುತ್ತಿದ್ದುದನ್ನು ಪೊಲೀಸರು ಪತ್ತೆಹಚ್ಚಿದರು.
41 ವರ್ಷದ ಮಹಿಳೆಯ ವಾಹನ ಮಂಗಳವಾರ ಮಧ್ಯಾಹ್ನ ಹೆದ್ದಾರಿ ಪಕ್ಷದ ಕಚೇರಿಯೊಂದರ ಪಾರ್ಕಿಗ್ ಸ್ಥಳದಲ್ಲಿ ಸಿಕ್ಕಿಹಾಕಿಕೊಂಡಿತ್ತು ಎನ್ನಲಾಗಿದೆ. ಮಹಿಳೆ ತನ್ನ ಮಗುವಿನೊಂದಿಗೆ ಸುರಕ್ಷಿತ ಸ್ಥಳಕ್ಕೆ ನಡೆಯುತ್ತಿದ್ದುದನ್ನು ವ್ಯಕ್ತಿಯೊಬ್ಬರು ನೋಡಿದ್ದಾರೆ.
ಆಗ ಪಾರ್ಕಿಂಗ್ ಸ್ಥಳದ ಪಕ್ಕದಲ್ಲೇ ಹರಿಯುತ್ತಿದ್ದ ಚರಂಡಿ ಕಾಲುವೆಯ ಪ್ರವಾಹವು ಅವರನ್ನು ಒಮ್ಮೆಲೆ ಕೊಚ್ಚಿಕೊಂಡು ಹೋಯಿತು. ಮಗುವನ್ನು ಬೆನ್ನಮೇಲೆ ಕೂರಿಸಿ ಮಹಿಳೆ ಈಜಲು ಪ್ರಯತ್ನಿಸಿದರು. ಸುರಕ್ಷಿತವಾಗಿ ಈಜುವ ಯತ್ನದಲ್ಲಿ ವಿಫಲರಾದರೂ, ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾದರು ಎಂದು ಪೊಲೀಸರು ಹೇಳಿದ್ದಾರೆ. ಮಗು ಆಸ್ಪತ್ರೆಯಲ್ಲಿ ಚೇತರಿಸುತ್ತಿದೆ.