3ನೇ ತರಗತಿ ವಿದ್ಯಾರ್ಥಿಗೆ 40 ಬಾರಿ ಥಳಿಸಿದ ಅಧ್ಯಾಪಕಿ
Update: 2017-08-31 23:19 IST
ಲಕ್ನೋ, ಆ. 31: ಹಾಜರಾತಿ ಕರೆಯುವಾಗ ಪ್ರತಿಕ್ರಿಯಿಸಿಲ್ಲ ಎಂಬ ಕಾರಣಕ್ಕೆ ಲಕ್ನೋದ ಖಾಸಗಿ ಶಾಲೆಯಲ್ಲಿ ಅಧ್ಯಾಪಕಿ 3ನೇ ತರಗತಿ ವಿದ್ಯಾರ್ಥಿಗೆ ನಿರ್ಧಯವಾಗಿ 40 ಬಾರಿ ಥಳಿಸಿ ಎಳೆದೊಯ್ದ ಘಟನೆ ಗುರುವಾರ ವರದಿಯಾಗಿದೆ. ಘಟನೆ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಧ್ಯಾಪಕಿ ವಿದ್ಯಾರ್ಥಿಗೆ ಥಳಿಸಿ ಎಳೆದೊಯ್ಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
“ನಾನು ಡ್ರಾಯಿಂಗ್ ಮಾಡುವುದರಲ್ಲಿ ಮುಳುಗಿದ್ದೆ. ಅಧ್ಯಾಪಕಿ ಹಾಜರಿ ಕರೆಯುವಾಗ ನನಗೆ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ” ಎಂದು ವಿದ್ಯಾರ್ಥಿ ಹೇಳಿದ್ದಾನೆ. ಬುಧವಾರ ಬಾಲಕ ಶಾಲೆಯಿಂದ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಬಾಲಕನ ಮುಖ ಊದಿಕೊಂಡಿರುವುದು ಹಾಗೂ ಆತ ಖಿನ್ನನಾಗಿರುವುದನ್ನು ಹೆತ್ತವರು ಗಮನಿಸಿ ಬಳಿಕ ಅಧ್ಯಾಪಕಿಯ ವಿರುದ್ಧ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.