×
Ad

ಮ.ಪ್ರದೇಶ ಸಿಎಂ ವಾಹನ ಬೆಂಗಾವಲು ಪಡೆಯಿಂದ ಸಂಚಾರ ತಡೆ: ಅಪಘಾತದ ಗಾಯಾಳು ಮೃತ್ಯು

Update: 2017-08-31 23:44 IST

ಹೊಸದಿಲ್ಲಿ, ಆ.31: ಅಪಘಾತಕ್ಕೆ ಸಿಲುಕಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ಹೊತ್ತೊಯ್ಯುತ್ತಿದ್ದ ವಾಹನವು, ಮುಖ್ಯಮಂತ್ರಿಯ ಬೆಂಗಾವಲು ವಾಹನ ಪಡೆಯಿಂದ ಉಂಟಾದ ಸಂಚಾರ ತಡೆಯ ಕಾರಣ ಆಸ್ಪತ್ರೆಗೆ ತಲುಪಲು ವಿಳಂಬವಾಗಿ ಗಾಯಾಳು ಯುವಕ ಮೃತಪಟ್ಟ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಕಗ್‌ಪುರ ವಿದಿಶಾದಲ್ಲಿ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ರೈತರಿಗೆ ಬೆಳೆ ವಿಮೆ ಪ್ರಮಾಣಪತ್ರವನ್ನು ವಿತರಿಸುವ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕರ್ತರನ್ನು ಸಾಗಿಸುತ್ತಿದ್ದ ಬಸ್‌ನ ಕ್ಲೀನರ್ ಆಗಿದ್ದ ಸಾಜಿದ್ ಖಾನ್ ಎಂಬಾತ ಬೆಳಿಗ್ಗೆ ಸುಮಾರು 11 ಗಂಟೆ ವೇಳೆಗೆ ಚಲಿಸುತ್ತಿದ್ದ ಬಸ್‌ನಿಂದ ಅಕಸ್ಮಿಕವಾಗಿ  ಕೆಳಕ್ಕೆ ಬಿದ್ದು ತೀವ್ರ ಗಾಯಗೊಂಡಿದ್ದ ಈತನನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನ ನಡೆಸಲಾಯಿತಾದರೂ ಮುಖ್ಯಮಂತ್ರಿ ಬೆಂಗಾವಲಿನ ವಾಹನ ಪಡೆ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಕಾರಣ ಸಂಚಾರ ಸ್ಥಗಿತಗೊಂಡಿತ್ತು.

 ಸಾಮಾನ್ಯ ಸಂದರ್ಭದಲ್ಲಿ ಆದರೆ ಈತನನ್ನು ಕರೆತರುತ್ತಿದ್ದ ವಾಹನ 15 ನಿಮಿಷದಲ್ಲಿ ನತೇರನ್‌ನ ಸರಕಾರಿ ಆಸ್ಪತ್ರೆ ತಲುಪಬಹುದಿತ್ತು. ಆದರೆ ಸಂಚಾರ ತಡೆಯ ಪರಿಣಾಮ ಆತನನ್ನು ಆಸ್ಪತ್ರೆಗೆ ಸಾಗಿಸಲು ಸುಮಾರು 3 ಗಂಟೆ ಬೇಕಾಯಿತು. ಮೂಗು ಮತ್ತು ಬಾಯಿಯಿಂದ ರಕ್ತಸ್ರಾವವಾಗುತ್ತಿದ್ದ ಸಾಜಿದ್‌ಖಾನ್ ಆಸ್ಪತ್ರೆಗೆ ಕರೆತರುವ ವೇಳೆಗಾಗಲೇ ಮೃತನಾಗಿದ್ದ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ ನೀತು ಸಿಂಗ್ ತಿಳಿಸಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ವಕ್ತಾರ ರಾಹುಲ್ ಕೊಠಾರಿ, ನಮ್ಮ ಮುಖ್ಯಮಂತ್ರಿ ಅತ್ಯಂತ ಸಂವೇದನಾಶೀಲ ವ್ಯಕ್ತಿಯಾಗಿದ್ದು ಯಾರೊಬ್ಬರಿಗೂ ತೊಂದರೆಯಾಗಬಾರದು ಎಂಬುದು ಇವರ ಧೋರಣೆಯಾಗಿದೆ. ಸಾಜಿದ್‌ಖಾನ್ ಕುಟುಂಬದವರಿಗೆ  ಪರಿಹಾರ ಧನ ನೀಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ ಎಂದು ಹೇಳಿದ್ದಾರೆ.

ಆದರೆ ಘಟನೆಯನ್ನು ಟೀಕಿಸಿರುವ ಕಾಂಗ್ರೆಸ್, ಕೆಂಪು ಗೂಟವನ್ನು ಕಿತ್ತುಹಾಕಿದರೂ ಅಧಿಕಾರದಲ್ಲಿರುವ ಜನರು ಪಾಳೇದಾರರಂತೆ ವರ್ತಿಸುತ್ತಿರುವುದು ಮುಂದುವರಿದಿದೆ. ತಾವು ಕಾನೂನಿಗಿಂತ ಮಿಗಿಲು ಎಂಬಂತೆ ಭಾರತೀಯ ರಾಜಕಾರಣಿಗಳು ಇನ್ನೂ ವರ್ತಿಸುತ್ತಿರುವುದು ಯಾಕೆ ಎಂದು ವಿಪಕ್ಷ ನಾಯಕ ಅಜಯ್ ಸಿಂಗ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News