ಭಾರತೀಯ ಮೂಲದ ಅಧಿಕಾರಿ ಜೆ.ವೈ.ಪಿಳ್ಳೈ ಸಿಂಗಾಪುರದ ಹಂಗಾಮಿ ಅಧ್ಯಕ್ಷ

Update: 2017-09-01 08:07 GMT

ಸಿಂಗಾಪುರ, ಸೆ.1: ಇಲ್ಲಿನ ಹಿರಿಯ ಸರಕಾರಿ ಅಧಿಕಾರಿ, ಭಾರತೀಯ ಮೂಲದ ಜೆ.ವೈ.ಪಿಳ್ಳೈ ಅವರನ್ನು ಶುಕ್ರವಾರ ಸಿಂಗಾಪುರದ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ತಿಂಗಳ ಮುಂದಿನ ದಿನಗಳಲ್ಲಿ ದೇಶದ ಹೊಸ ಅಧ್ಯಕ್ಷರ ನೇಮಕವಾಗುವ ತನಕ ಅವರು ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ಕೌನ್ಸಿಲ್ ಆಫ್ ಪ್ರೆಸಿಡೆನ್ಶಿಯಲ್ ಅಡ್ವೈರ್ಸ್ ಅಧ್ಯಕ್ಷರಾಗಿರುವ 83 ವರ್ಷದ ಪಿಳ್ಳೈ ಈಗಾಗಲೇ ಆರು ವರ್ಷ ಅಧಿಕಾರಾವಧಿ ಪೂರೈಸಿರುವ ಟೋನಿ ಟ್ಯಾನ್ ಕೆಂಗ್ ಯಾಮ್ ಅವರಿಂದ ಅಧಿಕಾರ ಸ್ವೀಕರಿಸಿದರು.

ಸೆಪ್ಟಂಬರ್ 23ರಂದು ಚುನಾವಣೆ ನಡೆಯುವ ತನಕ ಅಥವಾ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಸೆಪ್ಟೆಂಬರ್ 13ರಂದು ಯಾರಾದರೂ ಸರ್ವಾನುಮತದಿಂದ ಆಯ್ಕೆಯಾದಲ್ಲಿ ಅಲ್ಲಿಯ ತನಕ ಪಿಳ್ಳೈ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ.

ಅಧ್ಯಕ್ಷ ಹುದ್ದೆ ಖಾಲಿ ಬಿದ್ದಾಗ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಸಿಪಿಎ ಚೇರ್ ಮೇನ್ ಮೊದಲ ಆಯ್ಕೆಯಾದರೆ, ನಂತರದ ಆಯ್ಕೆ ಸಂಸತ್ತಿನ ಸ್ಪೀಕರ್.

ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ ಪಿಳ್ಳೈ ಅವರಿಗೆ ಹೊಸದೇನಲ್ಲ. ಅಧ್ಯಕ್ಷರು ವಿದೇಶ ಪ್ರವಾಸ ಹೋದಾಗಲೆಲ್ಲಾ ಅವರೇ ಕಾರ್ಯಭಾರ ನಿರ್ವಹಿಸಿದ್ದರು. ಒಟ್ಟು 60ಕ್ಕೂ ಹೆಚ್ಚು ಬಾರಿ ಹಂಗಾಮಿ ಅಧ್ಯಕ್ಷರಾಗಿರುವ ಅವರು ಅತೀ ಹೆಚ್ಚು ದಿನಗಳ ಕಾಲ, ಅಂದರೆ 16 ದಿನಗಳ ತನಕ 2007ರಲ್ಲಿ ಆಗಿನ ಅಧ್ಯಕ್ಷ ಎಸ್ ಆರ್ ನಾಥನ್ ಅವರು ಆಫ್ರಿಕಾಗೆ ಭೇಟಿ ನೀಡಿದ ಸಂದರ್ಭ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News