ಪದೇ ಪದೇ ಮೂತ್ರವಿಸರ್ಜನೆ ಅನಾರೋಗ್ಯದ ಸಂಕೇತವೇ....?
ನೀವು ದಿನಕ್ಕೆ ಎಷ್ಟು ಬಾರಿ ಮೂತ್ರ ವಿಸರ್ಜನೆ ಮಾಡುತ್ತೀರಿ ಎನ್ನುವುದು ನೀವು ಆರೋಗ್ಯವಾಗಿದ್ದೀರಾ ಅಥವಾ ಅನಾರೋಗ್ಯ ಕಾಡುತ್ತಿದೆಯೇ ಎನ್ನುವುದನ್ನು ನಿರ್ಧರಿಸುತ್ತದೆ. ನಿಮ್ಮ ಜೀವನಶೈಲಿ ಅಥವಾ ಆರೋಗ್ಯ ಕೆಟ್ಟದ್ದಾಗಿದ್ದರೆ ಅದರ ನೇರ ಪರಿಣಾಮ ನಿಮ್ಮ ಮೂತ್ರ ವಿಸರ್ಜನೆ ವ್ಯವಸ್ಥೆಯ ಮೇಲೆ ಉಂಟಾಗುತ್ತದೆ. ಅಲ್ಲದೆ ನೀವು ಎಷ್ಟು ನೀರು ಕುಡಿಯುತ್ತೀರಿ ಎನ್ನುವುದು ನೀವು ಎಷ್ಟು ಬಾರಿ ಮೂತ್ರ ವಿಸರ್ಜಿಸುತ್ತೀರಿ ಎನ್ನುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ನಿಮ್ಮ ಆರೋಗ್ಯದಲ್ಲಿ ಏರುಪೇರಾಗಿದೆಯೇ ಎನ್ನುವುದನ್ನು ತಿಳಿಯಲು ನಿಮ್ಮ ಮೂತ್ರವಿಸರ್ಜನೆಯ ಪ್ರಮಾಣ ಸಾಮಾನ್ಯವಾಗಿದೆಯೇ ಅಥವಾ ಅತಿಯಾಗಿ ಮೂತ್ರ ವಿಸರ್ಜನೆಯಾಗುತ್ತಿದೆಯೇ ಎನ್ನುವುದನ್ನು ತಿಳಿದುಕೊಳ್ಳುವುದು ಅಗತ್ಯವಾಗಬಹುದು.
ಸಾಮಾನ್ಯವಾಗಿ ವ್ಯಕ್ತಿಯೋರ್ವ ದಿನಕ್ಕೆ 4ರಿಂದ 8 ಸಲ ಮೂತ್ರ ವಿಸರ್ಜಿಸುತ್ತಾನೆ. ನಮ್ಮ ಮೂತ್ರಕೋಶವು ಸುಮಾರು ಎರಡು ಕಪ್‌ಗಳಷ್ಟು ಮೂತ್ರವನ್ನು ಸಂಗ್ರಹಿಸಿಟ್ಟು ಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಅದು ಅಷ್ಟು ಮೂತ್ರವನ್ನು ಸುಮಾರು 3ರಿಂದ 5 ಗಂಟೆಗಳ ಕಾಲ ಮಾತ್ರ ಹಿಡಿದಿಟ್ಟುಕೊಳ್ಳಲು ಸಾಧ್ಯ.
ನೀವು ಮೂತ್ರ ವಿಸರ್ಜಿಸುವಾಗ ನೋವು ಅಥವಾ ಉರಿಯ ಅನುಭವವಾದರೆ ನೀವು ಖಂಡಿತವಾಗಿಯೂ ಅದನ್ನು ನಿರ್ಲ್ಕಕ್ಷಿಸುವಂತಿಲ್ಲ. ಅಲ್ಲದೆ ಸಾಮಾನ್ಯಕ್ಕಿಂತ ಹೆಚ್ಚು ಬಾರಿ ಮೂತ್ರ ವಿಸರ್ಜಿಸುತ್ತೀರಿ ಎಂದರೆ ಅದೂ ಸಮಸ್ಯೆಗೆ ಕಾರಣವಾಗಬಹುದು. ನೀವು ಎಷ್ಟು ಸಲ ಮೂತ್ರ ವಿಸರ್ಜಿಸುತ್ತೀರಿ ಎನ್ನುವುದು ನಿಮ್ಮ ಆರೋಗ್ಯದ ಬಗ್ಗೆ ಬಹಳಷ್ಟನ್ನು ಹೇಳುತ್ತದೆ. ಪದೇ ಪದೇ ಮೂತ್ರ ವಿಜರ್ಜನೆಯಾಗುವುದು ಗಂಭೀರ ಸಮಸ್ಯೆಯನ್ನು ಸೂಚಿಸುತ್ತದೆ.
ರಾತ್ರಿ ವೇಳೆ ಮೂತ್ರ ವಿಸರ್ಜನೆಗಾಗಿ ನೀವು ಒಂದೇ ಬಾರಿ ಏಳುತ್ತೀರಾದರೆ ಆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ, ಅದು ಸಾಮಾನ್ಯವಾಗಿದೆ. ಕೆಲವರು ಬೆಳಗ್ಗಿನವರೆಗೆ ಒಂದು ಬಾರಿಯೂ ಏಳುವುದಿಲ್ಲ ಮತ್ತು ಅದೂ ಸಾಮಾನ್ಯವೇ ಆಗಿದೆ.
ಮೂತ್ರ ವಿಸರ್ಜನೆಯ ಮೇಲೆ ಹತೋಟಿಯಿಲ್ಲದಿದ್ದರೆ ಮೂತ್ರವನ್ನು ಬಹಳಷ್ಟು ಸಮಯ ತಡೆ ಹಿಡಿಯುವುದು ಕಷ್ಟವಾಗುತ್ತದೆ. ನೀವು ಬಹಳಷ್ಟು ಸಲ ಮೂತ್ರವನ್ನು ವಿಸರ್ಜಿಸುತ್ತಿದ್ದರೆ ಮೂತ್ರವನ್ನು ಹೊರಹಾಕುವ ಒತ್ತಡ ಹೆಚ್ಚುವವರೆಗೆ ನಿಮ್ಮನ್ನು ನಿಯಂತ್ರಿಸಿಕೊಳ್ಳುವ ಮೂಲಕ ಪದೇ ಪದೇ ಮೂತ್ರ ವಿಸರ್ಜನೆಗೆ ಎದ್ದು ಹೋಗುವುದನ್ನು ಕಡಿಮೆ ಮಾಡಬಹುದು.
ಮೂತ್ರವನ್ನು ಬಹಳ ಸಮಯ ತಡೆ ಹಿಡಿಯುವುದು ಕೆಟ್ಟದ್ದೇನಲ್ಲ. ಆದರೆ ನೋವಾಗುವವರೆಗೂ ಮೂತ್ರವನ್ನು ತಡೆ ಹಿಡಿದರೆ ಅದು ಮೂತ್ರಕೋಶ ಮತ್ತು ಶರೀರದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.
ಯಾವುದೇ ಕಾರಣವಿಲ್ಲದೆ ನಿಮ್ಮ ಮೂತ್ರ ವಿಸರ್ಜನೆಯ ಪ್ರವೃತ್ತಿಯಲ್ಲಿ ಬದಲಾವಣೆ ಗಳು ಕಂಡು ಬಂದರೆ ನೀವು ವೈದ್ಯರನ್ನು ಕಾಣಬೇಕಾಗಬಹುದು. ನೀವು ಬಹಳಷ್ಟು ಬಾರಿ ಮೂತ್ರ ವಿಸರ್ಜಿಸುತ್ತಿದ್ದರೆ ಅಥವಾ ಸಾಕಷ್ಟು ಮೂತ್ರ ವಿಸರ್ಜನೆಯಾಗದಿದ್ದರೆ ಅಥವಾ ರಾತ್ರಿ ವೇಳೆ ಮೂತ್ರ ವಿಸರ್ಜನೆಗಾಗಿ ಹಲವಾರು ಬಾರಿ ಏಳುತ್ತಿದ್ದರೆ ನೀವು ವೈದ್ಯರ ಸಲಹೆ ಪಡೆಯಲೇಬೇಕು.
ನೀವು ಮೂತ್ರ ವಿಸರ್ಜನೆ ಮಾಡಿದ ಸ್ವಲ್ಪವೇ ಹೊತ್ತಿನಲ್ಲಿ ಮತ್ತೆ ವಿಸರ್ಜಿಸಬೇಕು ಎನ್ನಿಸುತ್ತಿದ್ದರೆ ಅದು ಸೋಂಕಿನ ಲಕ್ಷಣವಾಗಿರಬಹುದು. ಮೂತ್ರವನ್ನು ವಿಸರ್ಜಿಸುವಾಗ ಉರಿಯುತ್ತಿದ್ದರೆ, ಮೂತ್ರಕೋಶವನ್ನು ಸಂಪೂರ್ಣವಾಗಿ ಖಾಲಿ ಮಾಡಲು ಸಾಧ್ಯವಾಗ ದಿದ್ದರೆ ಅಥವಾ ಮೂತ್ರವು ಹಳದಿಯಾಗಿದ್ದರೆ ಮತ್ತು ಜ್ವರ ಕಾಡುತ್ತಿದ್ದರೆ ಅದು ಮೂತ್ರನಾಳದ ಸೋಂಕಿನ ಲಕ್ಷಣಗಳಾಗಿರಬಹುದು.