ನ್ಯಾಯಕ್ಕಾಗಿ ವೃದ್ಧ ತಂದೆ-ತಾಯಿಯನ್ನು ಹೊತ್ತು ತಿರುಗುತ್ತಿರುವ ಯುವಕ!

Update: 2017-09-01 15:16 GMT

ಭುವನೇಶ್ವರ, ಸೆ.1:ನಮ್ಮ ದೇಶದಲ್ಲಿ ಬಡ ವ್ಯಕ್ತಿಯೊಬ್ಬ ನ್ಯಾಯ ಪಡೆಯಲು ಎಷ್ಟು ಕಷ್ಟ ಎದುರಿಸಬೇಕಾಗುತ್ತದೆ ಎನ್ನುವುದಕ್ಕೆ ಇಲ್ಲಿದೆ ಒಂದು ಉತ್ತಮ ನಿದರ್ಶನ. ಆದಿವಾಸಿ ಜನಾಂಗದ ವಿದ್ಯಾವಂತ ಯುವಕಯೊಬ್ಬ ಯಾರೋ ಮಾಡಿದ ತಪ್ಪಿಗಾಗಿ ತನ್ನ ತಂದೆ-ತಾಯಿಯನ್ನು ಹೆಗಲಮೇಲೆ ಹೊತ್ತುಕೊಂಡು ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾನೆ.

 ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಮೊರೊದಾ ಹಳ್ಳಿಯ ಕಾರ್ತಿಕ್ ಸಿಂಗ್ ವಿರುದ್ಧ ಪೊಲೀಸರು ನಕಲಿ ಎಫ್‌ಐಆರ್ ದಾಖಲಿಸಿ 18 ದಿನ ಜೈಲಿನಲ್ಲಿ ಕೂಡಿಹಾಕಿದ್ದರು. ಜೈಲಿಗೆ ಹೋದ ಬಂದ ಬಳಿಕ ಗ್ರಾಮಸ್ಥರು ಆತನನ್ನು ಬಹಿಷ್ಕರಿಸಿದ್ದಾರೆ.

 ವಿದ್ಯಾವಂತನಾಗಿರುವ ಕಾರ್ತಿಕ್‌ಗೆ ತನ್ನ ಊರಿನಲ್ಲಿ ಉದ್ಯೋಗ ಸಿಗುತ್ತಿಲ್ಲ. ಗ್ರಾಮಸ್ಥರು ಆತನಿಗೆ ಕೆಲಸ ನೀಡಲು ನಿರಾಕರಿಸುತ್ತಿದ್ದಾರೆ. ಮನೆಯಲ್ಲಿ ವೃದ್ಧ ತಂದೆ-ತಾಯಂದಿರು ಇರುವ ಕಾರಣ ಆತನಿಗೆ ಊರು ಬಿಟ್ಟು ಹೋಗುವಂತಿಲ್ಲ. ಇದೀಗ ತಂದೆ-ತಾಯಿಯನ್ನು ಹೆಗಲಮೇಲೆ ಹೊತ್ತುಕೊಂಡು ನ್ಯಾಯಕ್ಕಾಗಿ 40 ಕಿ.ಮೀ. ಕ್ರಮಿಸಿದ್ದಾನೆ. ಆಧುನಿಕ ಶ್ರವಣಕುಮಾರ ಕಾರ್ತಿಕ್ ತಂದೆ-ತಾಯಿಯನ್ನು ಹೊತ್ತು ತಿರುಗುತ್ತಿರುವ ವಿಡಿಯೋ ವೈರಲ್ ಆಗಿದೆ.

 "ಮೊರಾದ ಪೊಲೀಸರು ಸುಳ್ಳು ಮೊಕದ್ದಮೆ ದಾಖಸುವುದರಲ್ಲಿ ಎತ್ತಿದ ಕೈ. ಸಿಂಗ್ ವಿರುದ್ಧದ ಪ್ರಕರಣ ಕಳೆದ ಆರೇಳು ವರ್ಷಗಳಿಂದ ನ್ಯಾಯಾಲಯದಲ್ಲಿದೆ. ಸಾಲಗಾರನಾಗಿರುವ ಕಾರ್ತಿಕ್‌ಗೆ ಊಟ-ತಿಂಡಿಗೆ ಹಣವಿಲ್ಲ'' ಎಂದು ವಕೀಲ ಪ್ರಭುದನ್ ಹೇಳಿದ್ದಾರೆ.

  ""ನಾನು ಈ ಹಿಂದೆ 18 ದಿನ ಜೈಲಿನಲ್ಲಿದ್ದಾಗ ತಂದೆ-ತಾಯಿ ಇಬ್ಬರೇ ಇದ್ದರು. ಇದೀಗ ಅವರನ್ನು ಒಂಟಿಯಾಗಿ ಬಿಡಲು ನನಗಿಷ್ಟವಿಲ್ಲ. ಹೆತ್ತವರು ನನ್ನ ಬಿಟ್ಟು ಅಗಲುವ ಮೊದಲು ನಾನು ಮುಗ್ದನೆಂದು ಸಾಬೀತು ಮಾಡಬೇಕಾಗಿದೆ. 2009ರಲ್ಲಿ ನನ್ನ ವಿರುದ್ಧ ಪ್ರಕರಣ ದಾಖಲಾಗಿರುವ ಕಾರಣ ನಾನು ಇನ್ನೂ ವಿವಾಹವಾಗಿಲ್ಲ'' ಎಂದು ಕಾರ್ತಿಕ್ ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News