ಕೇಂದ್ರದ ನೀಟ್ ಕಡ್ಡಾಯಕ್ಕೆ ತಮಿಳುನಾಡಿನ ಪ್ರತಿಭಾವಂತ ದಲಿತ ವಿದ್ಯಾರ್ಥಿನಿ ಬಲಿ

Update: 2017-09-01 16:07 GMT

ಚೆನ್ನೈ, ಸೆ.1: ತಮಿಳುನಾಡಿನಲ್ಲಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್)ಜಾರಿಗೆ ತರುವುದನ್ನು ವಿರೋಧಿಸುತ್ತಿದ್ದ ಪ್ರತಿಭಾವಂತ ದಲಿತ ವಿದ್ಯಾರ್ಥಿನಿ ಎಸ್. ಅನಿತಾ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ತಮಿಳುನಾಡು ನೀಟ್‌ನಿಂದ ಹೊರಗುಳಿಯುವಂತಿಲ್ಲ ಎಂದು ಕೇಂದ್ರ ವಾದ ಮಂಡಿಸಿದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನೀಟ್ ಜಾರಿಗೆ ತರುವಂತೆ ತಮಿಳುನಾಡು ಸರಕಾರಕ್ಕೆ ಆದೇಶಿಸಿತ್ತು. ಸುಪ್ರೀಂ ಆದೇಶ ನೀಡಿದ ವಾರದಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

 ಅನಿತಾ 12ನೆ ತರಗತಿಯಲ್ಲಿ 1200 ಅಂಕದಲ್ಲಿ 1176 ಗಳಿಸಿದ್ದರು. ಇಂಜಿನಿಯರಿಂಗ್‌ನಲ್ಲಿ 199.75 ಹಾಗೂ ಮೆಡಿಶಿನ್‌ನಲ್ಲಿ 196.75 ಅಂಕ ಗಳಿಸಿದ್ದರು. ಮದ್ರಾಸ್ ತಾಂತ್ರಿಕ ಸಂಸ್ಥೆಯಲ್ಲಿ ವೈಮಾನಿಕ ಇಂಜಿನಿಯರ್ ಕೋರ್ಸ್‌ಗೆ ಸೀಟು ಲಭಿಸಿತ್ತು. ಆದರೆ, ಅನಿತಾಗೆ ವೈದ್ಯಳಾಗಬೇಕೆಂಬ ಕನಸಿತ್ತು.

 ಅನಿತಾಗೆ ವೈದ್ಯಕೀಯ ಕೋರ್ಸ್‌ಗೆ ಸೇರಲು ನೀಟ್ ಪಾಸಾಗಲು ಸಾಧ್ಯವಾಗಲಿಲ್ಲ. ಕೇಂದ್ರ ಕಳೆದ ವರ್ಷ ವೈದ್ಯಕೀಯ ಸೀಟಿಗೆ ನೀಟ್ ಪರೀಕ್ಷೆಯನ್ನು ಕಡ್ಡಾಯ ಮಾಡಿತ್ತು. ತಮಿಳುನಾಡಿನಲ್ಲಿ ನೀಟ್‌ಗೆ ವಿನಾಯಿತಿ ನೀಡಬೇಕೆಂದು ಕೋರಿ ಅನಿತಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಕೇಂದ್ರ ಸರಕಾರ ನೀಟ್ ಕಡ್ಡಾಯಕ್ಕೆ ಒಂದು ವರ್ಷ ವಿನಾಯಿತಿ ಇದೆ ಎಂದು ಈ ಮೊದಲು ಭರವಸೆ ನೀಡಿತ್ತು. ಆನಂತರ ಕೇಂದ್ರ ಸರಕಾರ ಯು-ಟರ್ನ್ ಹೊಡೆದಿತ್ತು.

ಅನಿತಾರ ತಂದೆ ತಿರುಚ್ಚಿಯ ಗಾಂಧಿ ಮಾರುಕಟ್ಟೆಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದು, ಅನಿತಾ ಪರ ನಳಿನಿ ಚಿದಂಬರಂ ವಾದ ಮಂಡಿಸಿದ್ದರು.

ನೀಟ್ ವಿರುದ್ಧ ವಾದ ಮಂಡಿಸಿದ ತಮಿಳುನಾಡು, ಈ ಪರೀಕ್ಷೆ ಸಿಬಿಎಸ್‌ಇ ಪರವಾಗಿದೆ. ರಾಜ್ಯಮಂಡಳಿಯ ಪಠ್ಯಕ್ರಮದ ವಿರುದ್ಧವಾಗಿದೆ ಎಂದು ವಾದ ಮಂಡಿಸಿತ್ತು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ಬಡ ಕುಟುಂಬದ ವಿದ್ಯಾರ್ಥಿಗಳು ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆಯುವುದು ಕಷ್ಟಕರವಾಗಿದೆ ಎಂದು ರಾಜಕೀಯ ನಾಯಕರು ವಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News