ಕ್ಯೂಬ: ‘ಶಬ್ದ ದಾಳಿ’ಯಿಂದ ಅಮೆರಿಕ ರಾಜತಾಂತ್ರಿಕರ ಮೆದುಳಿಗೆ ಹಾನಿ; ಸ್ಟಾಫ್ ಅಸೋಸಿಯೇಶನ್ ಆರೋಪ

Update: 2017-09-02 14:21 GMT

ವಾಶಿಂಗ್ಟನ್, ಸೆ. 2: ಕ್ಯೂಬದಲ್ಲಿರುವ ಅಮೆರಿಕ ರಾಯಭಾರ ಕಚೇರಿಯಲ್ಲಿ ನಿಗೂಢ ‘ಶಬ್ದ ದಾಳಿ’ಯಲ್ಲಿ ಗಾಯಗೊಂಡಿರುವ ಕೆಲವು ರಾಜತಾಂತ್ರಿಕರು ಮೆದುಳಿನ ಗಾಯಗಳಿಗೆ ಅಥವಾ ಶಾಶ್ವತ ಕಿವುಡುತನಕ್ಕೆ ಒಳಗಾಗಿದ್ದಾರೆ ಎಂದು ಅವರ ಸ್ಟಾಫ್ ಅಸೋಸಿಯೇಶನ್ ಶುಕ್ರವಾರ ಹೇಳಿದೆ.

ಕ್ಯೂಬಾ ರಾಜಧಾನಿ ಹವಾನದಲ್ಲಿ ಕಳೆದ ವರ್ಷ ಆರಂಭಗೊಂಡ ಸರಣಿ ಘಟನೆಗಳಲ್ಲಿ ತನ್ನ ರಾಯಭಾರ ಕಚೇರಿಯ ಕನಿಷ್ಠ 16 ಉದ್ಯೋಗಿಗಳು ಗಾಯಗೊಂಡಿದ್ದಾರೆ ಎಂದು ವಾಶಿಂಗ್ಟನ್ ಇತ್ತೀಚೆಗೆ ಹೇಳಿತ್ತು. ಆದರೆ, ಗಾಯದ ಪ್ರಮಾಣವನ್ನು ಅಧಿಕಾರಿಗಳು ಹೇಳಿರಲಿಲ್ಲ.

ಈಗ, ಅಮೆರಿಕದ ರಾಜತಾಂತ್ರಿಕ ಮತ್ತು ಅಂತಾರಾಷ್ಟ್ರೀಯ ನೆರವು ಸಿಬ್ಬಂದಿಯನ್ನು ಪ್ರತಿನಿಧಿಸುವ ಕಾರ್ಮಿಕ ಸಂಘಟನೆ ಅಮೆರಿಕನ್ ವಿದೇಶ ಸೇವೆ ಅಸೋಸಿಯೇಶನ್‌ಗೆ ಚಿಕಿತ್ಸೆ ಪಡೆದವರ ಪೈಕಿ 10 ಮಂದಿಯ ಜೊತೆ ಮಾತನಾಡುವ ಅವಕಾಶ ಲಭಿಸಿದೆ.

‘‘ಲಘು ಆಘಾತಕರ ಮೆದುಳು ಗಾಯ ಮತ್ತು ಶಾಶ್ವತ ಕಿವುಡುತನಕ್ಕೆ ರಾಯಭಾರ ಸಿಬ್ಬಂದಿ ಒಳಗಾಗಿರುವುದು ಚಿಕಿತ್ಸೆಯ ವೇಳೆ ಪತ್ತೆಯಾಗಿದೆ. ಅದೇ ವೇಳೆ, ಸಮತೋಲನ ಕೊರತೆ, ತೀವ್ರ ತಲೆನೋವು, ಭ್ರಮೆಗೆ ಒಳಗಾಗುವುದು ಮತ್ತು ಮೆದುಳಿನ ಊತ ಕೂಡ ಕಂಡು ಬಂದಿದೆ’’ ಎಂದು ಅಸೋಸಿಯೇಶನ್ ಹೇಳಿದೆ.

ಅರ್ಧ ಶತಮಾನದದ ವೈರತ್ವದ ಬಳಿಕ, ಕ್ಯೂಬದಲ್ಲಿ ಅಮೆರಿಕದ ಪೂರ್ಣ ಪ್ರಮಾಣದ ರಾಯಭಾರ ಕಚೇರಿ 2015ರಲ್ಲಿ ಪುನಾರಂಭಗೊಂಡಿತ್ತು. ರಾಯಭಾರಿಗಳು ಕಳೆದ ವರ್ಷ ಅಸ್ವಸ್ಥಗೊಂಡಿದ್ದರು.

ರಾಜತಾಂತ್ರಿಕರ ಆರೋಗ್ಯವನ್ನು ಹದಗೆಡಿಸಲು ಒಂದು ರೀತಿಯ ‘ಸಾನಿಕ್’ ಉಪಕರಣವನ್ನು ಬಳಸಲಾಗಿದೆ ಎಂಬುದಾಗಿ ಅಮೆರಿಕದ ಅಧಿಕಾರಿಗಳು ಸುದ್ದಿಗಾರರಿಗೆ ಹೇಳಿದ್ದಾರೆ.

ಅಭೂತಪೂರ್ವ ಆಕ್ರಮಣ: ಅಮೆರಿಕ

 ರಾಯಭಾರಿಗಳ ಮೇಲಿನ ಈ ‘ಶಬ್ದಾಕ್ರಮಣ’ ಅಭೂತಪೂರ್ವ ಎಂಬುದಾಗಿ ಅಮೆರಿಕದ ವಿದೇಶಾಂಗ ಇಲಾಖೆ ಬಣ್ಣಿಸಿದೆ ಹಾಗೂ ತನ್ನ ನೆಲದಲ್ಲಿ ಕೆಲಸ ಮಾಡುವ ರಾಯಭಾರಿಗಳ ಸುರಕ್ಷತೆಯ ಹೊಣೆ ಕ್ಯೂಬದ್ದಾಗಿದೆ ಎಂದು ಎಚ್ಚರಿಸಿದೆ.

ಈ ದಾಳಿಗಳ ಹಿಂದೆ ಯಾರಿದ್ದಾರೆ ಎನ್ನುವುದನ್ನು ಅದು ಹೇಳಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News