ಮ್ಯಾನ್ಮಾರ್: 2,600 ಮನೆಗಳಿಗೆ ಬೆಂಕಿ
ಕಾಕ್ಸ್‌ಬಝಾರ್ (ಬಾಂಗ್ಲಾದೇಶ), ಸೆ. 2: ಮ್ಯಾನ್ಮಾರ್‌ನ ವಾಯುವ್ಯ ಭಾಗದಲ್ಲಿರುವ ರೊಹಿಂಗ್ಯ ಬಾಹುಳ್ಯದ ಪ್ರದೇಶಗಳಲ್ಲಿ ಕಳೆದ ವಾರ 2,600ಕ್ಕೂ ಹೆಚ್ಚು ಮನೆಗಳನ್ನು ಸುಟ್ಟುಹಾಕಲಾಗಿದೆ ಎಂದು ಸರಕಾರ ಶನಿವಾರ ತಿಳಿಸಿದೆ.
ಸುಮಾರು 58,600 ರೊಹಿಂಗ್ಯ ಮುಸ್ಲಿಮರು ಮ್ಯಾನ್ಮಾರ್‌ನಿಂದ ನೆರೆಯ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತ ಸಂಸ್ಥೆ ಯುಎನ್‌ಎಚ್‌ಸಿಆರ್ ಹೇಳಿದೆ.
ಅರಕಾನ್ ರೊಹಿಂಗ್ಯ ಸಾಲ್ವೇಶನ್ ಆರ್ಮಿ (ಎಆರ್‌ಎಸ್‌ಎ) ಎಂಬ ಬಂಡುಕೋರ ಸಂಘಟನೆಯು ಮನೆಗಳನ್ನು ಸುಟ್ಟು ಹಾಕಿದೆ ಎಂದು ಮ್ಯಾನ್ಮಾರ್ ಅಧಿಕಾರಿಗಳು ಆರೋಪಿಸಿದ್ದಾರೆ. ಕಳೆದ ವಾರ ಭದ್ರತಾ ಠಾಣೆಗಳ ಮೇಲೆ ನಡೆದ ಸಂಘಟಿತ ದಾಳಿಯ ಹೊಣೆಯನ್ನೂ ಅದು ಹೊತ್ತುಕೊಂಡಿದೆ. ಈ ಹಿನ್ನೆಲೆಯಲ್ಲಿ, ಸೇನೆಯು ಭಾರೀ ಪ್ರಮಾಣದಲ್ಲಿ ದಮನ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿದೆ.
ಆದರೆ, ತಮ್ಮನ್ನು ಮ್ಯಾನ್ಮಾರ್‌ನಿಂದ ಹೊರದಬ್ಬುವ ಉದ್ದೇಶದಿಂದ ಮ್ಯಾನ್ಮಾರ್ ಸೇನೆಯೇ ಮನೆಗಳಿಗೆ ಬೆಂಕಿ ಕೊಡುತ್ತಿದೆ ಹಾಗೂ ಹತ್ಯಾಕಾಂಡದಲ್ಲಿ ತೊಡಗಿದೆ ಎಂದು ಬಾಂಗ್ಲಾದೇಶಕ್ಕೆ ಪಲಾಯನಗೈದಿರುವ ರೊಹಿಂಗ್ಯರು ಆರೋಪಿಸಿದ್ದಾರೆ.
ಸುಮಾರು 11 ಲಕ್ಷ ರೊಹಿಂಗ್ಯರ ದಮನಕ್ಕೆ ಮ್ಯಾನ್ಮಾರ್ ಸರಕಾರವೇ ಮುಂದಾಗಿರುವ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯ ಕಳವಳ ವ್ಯಕ್ತಪಡಿಸಿರುವುದನ್ನು ಸ್ಮರಿಸಬಹುದಾಗಿದೆ. ಹಿಂಸೆಗೆ ಗುರಿಯಾಗುತ್ತಿರುವ ಮುಸ್ಲಿಮ್ ಅಲ್ಪಸಂಖ್ಯಾತರ ಪರವಾಗಿ ದೇಶದ ಮುಖ್ಯಸ್ಥೆ ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಧ್ವನಿ ಎತ್ತುತ್ತಿಲ್ಲ ಎಂಬುದಾಗಿ ಅದು ಆರೋಪಿಸಿದೆ.
ಸೇನೆಯಿಂದಲೇ ಬೆಂಕಿ: ಹ್ಯೂಮನ್ ರೈಟ್ಸ್ ವಾಚ್
ಉಪಗ್ರಹ ಚಿತ್ರಗಳು ಮತ್ತು ಬಾಂಗ್ಲಾದೇಶಕ್ಕೆ ಪಲಾಯನಗೈದಿರುವ ರೊಹಿಂಗ್ಯರ ಹೇಳಿಕೆಗಳ ವಿಶ್ಲೇಷಣೆ ನಡೆಸಿರುವ ಮಾನವಹಕ್ಕುಗಳ ಸಂಘಟನೆ ‘ಹ್ಯೂಮನ್ ರೈಟ್ಸ್ ವಾಚ್’, ಮ್ಯಾನ್ಮಾರ್‌ನ ಭದ್ರತಾ ಪಡೆಗಳೇ ಉದ್ದೇಶಪೂರ್ವಕವಾಗಿ ಮನೆಗಳಿಗೆ ಬೆಂಕಿ ಕೊಟ್ಟಿವೆ ಎಂದಿದೆ.
‘‘ಮುಸ್ಲಿಮ್ ಗ್ರಾಮವೊಂದು ಸಂಪೂರ್ಣ ನಾಶವಾಗಿರುವುದನ್ನು ನೂತನ ಉಪಗ್ರಹ ಚಿತ್ರಗಳು ತೋರಿಸಿವೆ. ರಖೈನ್ ರಾಜ್ಯದಲ್ಲಿನ ವಿನಾಶದ ಮಟ್ಟ ಈ ಹಿಂದೆ ಭಾವಿಸಿರುವುದಕ್ಕಿಂತ ತುಂಬಾ ಗಂಭೀರವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ’’ ಎಂದು ಸಂಘಟನೆಯ ಉಪ ಏಶ್ಯ ನಿರ್ದೇಶಕ ಫಿಲ್ ರಾಬರ್ಟ್‌ಸನ್ ಹೇಳಿದರು.