×
Ad

ಆಗದ ಉದ್ಯೋಗ ಸೃಷ್ಟಿ: ಮೋದಿ ಸರ್ಕಾರದ ವೈಫಲ್ಯಕ್ಕೆ ರೂಡಿ ಬಲಿಪಶುವಾದರೇ?

Update: 2017-09-02 21:47 IST

ಕೇಂದ್ರ ಸಚಿವ ಸಂಪುಟ ಪುನರ್ರಚನೆಗೆ ಕ್ಷಣಗಣನೆಗೆ ಆರಂಭವಾಗುತ್ತಲೇ ಕೇಂದ್ರ ಸರಕಾರದ ಆರು ಸಚಿವರು ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಭಾರೀ ಭರವಸೆಗಳು, ಉದ್ಯೋಗ ಸೃಷ್ಟಿ, ಡಿಜಿಟಲ್ ಇಂಡಿಯಾ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಅಧಿಕಾರಕ್ಕೇರಿದ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರಕಾರ ತಾನು ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ   ವಿಫಲವಾಗಿದ್ದು, ಇದೇ ವೈಫಲ್ಯ ಈ ಸಚಿವರ ತಲೆದಂಡಕ್ಕೆ ಕಾರಣ ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದೆ.

ಮೋದಿ ಸರಕಾರದ ಬಹುಮುಖ್ಯ ಆಶ್ವಾಸನೆ ಹಾಗೂ ಯೋಜನೆಯಾಗಿದ್ದ ಉದ್ಯೋಗ ಸೃಷ್ಟಿ ಅಕ್ಷರಶಃ ವಿಫಲವಾಗಿದೆ. ನಕಲಿ ನೋಟು ಹಾವಳಿ ಸಂಪೂರ್ಣ ನಿಯಂತ್ರಣವಾಗಲಿದೆ ಡಿಜಿಟಲೀಕರಣ ಕ್ರಾಂತಿಯಾಗಲಿದೆ ಎನ್ನುವ ಭರವಸೆಯೊಂದಿಗೆ 2016ರಲ್ಲಿ ನರೇಂದ್ರ ಮೋದಿ ಘೋಷಿಸಿದ್ದ ನೋಟು ಅಮಾನ್ಯ ನಡೆ ವಿಫಲವಾಗಿದೆ ಎನ್ನುವ ಮಾಹಿತಿ ಆರ್ ಬಿಐ ವಿವರಗಳಿಂದಲೇ ಸ್ಪಷ್ಟವಾಗಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ನೋಟು ಅಮಾನ್ಯ ಪ್ರಕ್ರಿಯೆಯ ಸಂದರ್ಭ ಯೋಜನೆಯ ಅಸಮರ್ಪಕ ಸಿದ್ಧತೆ ಹಾಗೂ ನಂತರ ಕೈಗೊಳ್ಳಬೇಕಾಗಿದ್ದ ತುರ್ತು ಕ್ರಮಗಳು ಪರಿಣಾಮಕಾರಿಯಾಗಿ ಕಾರ್ಯಗತಗೊಳ್ಳದ ಪರಿಣಾಮ ಜನತೆ ಸಾಕಷ್ಟು ಸಮಸ್ಯೆ ಅನುಭವಿಸಿದ್ದರು. ಎಟಿಎಂಗಳಲ್ಲಿ ಹಣವಿಲ್ಲದೆ ಸಾಕಷ್ಟು ತೊಂದರೆ ಅನುಭವಿಸಿದ್ದರು. ಈ ಕ್ರಮ ರಿಯಲ್ ಎಸ್ಟೇಟ್, ವ್ಯಾಪಾರ, ಮಾರುಕಟ್ಟೆ, ಬ್ಯಾಂಕಿಂಗ್ ಮೊದಲಾದ ಕ್ಷೇತ್ರಗಳ ಮೇಲೆ ಬೀರಿದ ಪರಿಣಾಮ ಕೆಲದಿನಗಳ ಹಿಂದಷ್ಟೇ ಬೆಳಕಿಗೆ ಬಂದ ಜಿಡಿಪಿ ಕುಸಿತದಿಂದ ಬಹಿರಂಗಗೊಂಡಿದೆ ಎಂದು ಸಾಮಾಜಿಕ ಜಾಲತಾಣಗಳ ಬಳಕೆದಾರರು ಅಭಿಪ್ರಾಯಿಸುತ್ತಿದ್ದಾರೆ.

ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆಯ ಅಡಿಯಲ್ಲಿ 24 ಲಕ್ಷ ಮಂದಿಗೆ ತರಬೇತಿ ನೀಡಲು ಉದ್ದೇಶಿಸಲಾಗಿತ್ತು. ಇದಕ್ಕಾಗಿ ಕೇಂದ್ರ ಸರಕಾರ 1,500 ಕೋಟಿ ರೂ.ಗಳನ್ನು ಮೀಸಲಿರಿಸಿತ್ತು. 2020ರ ವೇಳೆಗೆ 1 ಕೋಟಿ ಜನರಿಗೆ ತರಬೇತಿ ನೀಡಲು ಎರಡನೆ ಹಂತದಲ್ಲಿ ಉದ್ದೇಶಿಸಲಾಗಿತ್ತು. ಇದಕ್ಕಾಗಿ 12 ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಈ ವಿಶೇಷ ಯೋಜನೆಯ  ಹೊಣೆಯನ್ನು ರಾಜೀವ್ ಪ್ರತಾಪ್ ರೂಡಿಯವರಿಗೆ ವಹಿಸಲಾಗಿತ್ತು. ಆದರೆ ಸೆಪ್ಟಂಬರ್ 1ರವರೆಗೆ 6 ಲಕ್ಷ ಮಂದಿಗೆ ಮಾತ್ರ ಕೌಶಲ್ಯ ತರಬೇತಿ ನೀಡಲು ಸಾಧ್ಯವಾಗಿದೆ ಎನ್ನುವುದು ಅಂಕಿ ಅಂಶಗಳಿಂದ ಬಹಿರಂಗಗೊಂಡಿದೆ.

ಉದ್ಯೋಗ ಸೃಷ್ಟಿಯ ಬದಲಾಗಿ ನೋಟು ಅಮಾನ್ಯೀಕರಣ ನೀತಿಯಿಂದಾಗಿ 1.6 ಕೋಟಿ ಭಾರತೀಯರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ‘ಲೇಬರ್ ಬ್ಯೂರೊ ಡಾಟ’ ವರದಿಯಲ್ಲಿ ತಿಳಿಸಿದೆ ಎಂದು ಕಾಂಗ್ರೆಸ್ ಈ ಹಿಂದೆ ಆರೋಪಿಸಿತ್ತು. ವರ್ಷಕ್ಕೆ 2 ಕೋಟಿ ಉದ್ಯೋಗವನ್ನು ಸೃಷ್ಟಿಸುವ ಭರವಸೆ ನೀಡಿದ್ದ ಮೋದಿ ಸರಕಾರ ಜನರನ್ನು ವಂಚಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿಯ ವಿರುದ್ಧ ವಾಗ್ದಾಳಿ ನಡೆಸಿದ್ದರು.

ನಿರೀಕ್ಷಿಸಿದ್ದ ಮಟ್ಟವೂ ತಲುಪದೆ ಕಳಪೆಯಾದ ಕೇಂದ್ರ ಸರಕಾರ ಈ ಯೋಜನೆಗೆ ರೂಡಿ ಬಲಿಪಶುವಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳ ಮಂದಿ ಅಭಿಪ್ರಾಯಿಸುತ್ತಿದ್ದಾರೆ. ರಾಜೀನಾಮೆಯ ಬಗ್ಗೆ ಪ್ರತಿಕ್ರಿಯಿಸಿದ್ದ ರಾಜೀವ್ ಪ್ರತಾಪ್ ರೂಡಿ, “ಇದು ನನ್ನ ನಿರ್ಧಾರವಲ್ಲ. ಇದು ಪಕ್ಷದ ನಿರ್ಧಾರವಾಗಿದ್ದು, ನಾನಿದನ್ನು ಪಾಲಿಸುತ್ತೇನೆ” ಎಂದಿದ್ದರು.

ಇಷ್ಟೇ ಅಲ್ಲದೆ ಜೂನ್‌ಗೆ ಅಂತ್ಯಗೊಂಡ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿಯು ಮೂರು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎನ್ನುವ ವಿಚಾರ ಕೇಂದ್ರ ಸರಕಾರದ ನೋಟು ಅಮಾನ್ಯ ನಡೆ ಎಷ್ಟರ ಮಟ್ಟಿಗೆ ದೇಶದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎನ್ನುವುದನ್ನು ನಿರೂಪಿಸಿತ್ತು. ಜಿಡಿಪಿ ಕುಸಿತದ ವರದಿಯು ಪ್ರಧಾನಿ ಮೋದಿಯವರಿಗೆ ತೀವ್ರ ಹಿನ್ನೆಡೆಯಾಗಿ ಪರಿಣಮಿಸಿತ್ತು.

2017 ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ)ವು ಶೇ.5.7ರ ದರದಲ್ಲಿ ಪ್ರಗತಿಯಾಗಿದ್ದು, ಇದು 2014ರ ಜನವರಿ-ಮಾರ್ಚ್ ತ್ರೈಮಾಸಿಕದ ಬಳಿಕ ಅತ್ಯಂತ ಮಂದಗತಿಯಾಗಿದೆ ಎಂದು ದತ್ತಾಂಶಗಳು ಬೆಟ್ಟುಮಾಡಿವೆ. ರೂಟರ್ಸ್‌ ಸಮೀಕ್ಷೆಯಲ್ಲಿ ಆರ್ಥಿಕ ತಜ್ಞರು ಶೇ.6.6 ಪ್ರಗತಿದರವನ್ನು ಅಂದಾಜಿಸಿದ್ದರು. ಈ ವರ್ಷದ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಶೇ.6.1ರಷ್ಟು ಪ್ರಗತಿ ದರ ದಾಖಲಾಗಿತ್ತು.

ಕಪ್ಪುಹಣವನ್ನು ಬಯಲಿಗೆಳೆಯುವ ಉದ್ದೇಶದಿಂದ ಮೋದಿಯವರು ಕೈಗೊಂಡಿದ್ದ ನೋಟು ಅಮಾನ್ಯ ಕ್ರಮದಿಂದಾಗಿ ಒಂದೇ ರಾತ್ರಿಯಲ್ಲಿ ದೇಶದಲ್ಲಿ ಚಲಾವಣೆಯಲ್ಲಿದ್ದ ಒಟ್ಟು ನೋಟುಗಳ ಪೈಕಿ ಶೇ.86ರಷ್ಟು ನೋಟುಗಳು ಅಸ್ತಿತ್ವವನ್ನು ಕಳೆದುಕೊಂಡಿದ್ದವು. ಪರಿಣಾಮವಾಗಿ ನಗದು ಹಣಕ್ಕಾಗಿ ಜನರು ಪರದಾಡುವಂತಾಗಿತ್ತು. ವ್ಯಾಪಾರ ವಹಿವಾಟುಗಳು ಹಿನ್ನಡೆಯನ್ನು ಕಂಡಿದ್ದವು. ಜಿಎಸ್‌ಟಿ ಜಾರಿಗೆ ಮುನ್ನ ಉಂಟಾಗಿದ್ದ ಗೊಂದಲವೂ ಆರ್ಥಿಕ ಚಟುವಟಿಕೆಯನ್ನು ಮಂದಗೊಳಿಸಿರುವಂತೆ ಕಂಡು ಬರುತ್ತಿದೆ. ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯ ಕುಸಿತದಲ್ಲಿ ಕೈಗಾರಿಕಾ ಕ್ಷೇತ್ರವು ಪ್ರಮುಖ ಪಾತ್ರ ವಹಿಸಿದೆ.

ಸಂಜೀವ್ ಬಾಲ್ಯನ್, ಉಮಾಭಾರತಿ ರಾಜೀನಾಮೆಯ ಹಿಂದೆ ಗಂಗಾನದಿ ಶುದ್ಧೀಕರಣ ಯೋಜನೆಯ ವೈಫಲ್ಯ

ಪ್ರಧಾನಿ ನರೇಂದ್ರ ಮೋದಿಯವರ ಮತ್ತೊಂದು ಯೋಜನೆಯಾದ ಗಂಗಾನದಿ ಶುದ್ಧೀಕರಣವೂ ಸಹ ಹಳ್ಳ ಹಿಡಿದಿದೆ. ಸಚಿವ ಸಂಜೀವ್ ಬಾಲ್ಯನ್ ಹಾಗೂ ಉಮಾಭಾರತಿ ಸಹಯೋಗದೊಂದಿಗೆ ಆರಂಭವಾದ ಈ ಯೋಜನೆಗೆ 20 ಸಾವಿರ ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿತ್ತು. “ಮಾರ್ಚ್ 2017ರವರೆಗೆ ಕೇಂದ್ರ ಸರಕಾರ, ಉತ್ತರ ಪ್ರದೇಶ ಸರಕಾರ ಹಾಗೂ ಸ್ಥಳೀಯಾಡಳಿತ 7,304.64 ಕೋಟಿ ರೂ. ಗಳನ್ನು ವ್ಯಯಿಸಿದ್ದರೂ ಯಾವುದೇ ಅಭಿವೃದ್ಧಿಯಾಗಿಲ್ಲ. ಬದಲಾಗಿ ಗಂಗಾ ಸಮಸ್ಯೆ ತೀವ್ರವಾಗಿದೆ” ಎಂದು ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ ಈ ಹಿಂದೆ ಹೇಳಿತ್ತು.

ಕೇಂದ್ರ ಸಚಿವರುಗಳ ರಾಜೀನಾಮೆಗೆ  ಮೋದಿ ಸರ್ಕಾರದ ಆಡಳಿತ ವೈಫಲ್ಯಗಳೇ ಪ್ರಮುಖ ಕಾರಣ ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಮಂದಿ ಈ ಬಗ್ಗೆ ಮಾಡಿರುವ ಪೋಸ್ಟ್ ಗಳು ಈ ಕೆಳಗಿನಂತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News