ಹರ್ಯಾಣ: ರೋಹಿಂಗ್ಯಾ ನಿರಾಶ್ರಿತರ ಮೇಲೆ ದಾಳಿ ನಡೆಸಿದ ಗುಂಪು

Update: 2017-09-03 07:55 GMT

ಈದುಲ್ ಅಝ್ ಹಾ ಬಲಿದಾನಕ್ಕೆ ವಿರೋಧ

ಜಾರ್ಖಂಡ್, ಸೆ.3: ಈದುಲ್ ಅಝ್ ಹಾ ಸಂದರ್ಭ ಬಲಿದಾನಕ್ಕೆ ವಿರೋಧಿಸಿದ ಗುಂಪೊಂದು ಹರ್ಯಾಣದ ಫರೀದಾಬಾದ್ ಜಿಲ್ಲೆಯ ಬಲ್ಲಾಬ್ ಗರ್ ಎಂಬಲ್ಲಿ 45 ರೋಹಿಂಗ್ಯನ್ ನಿರಾಶ್ರಿತ ಮುಸ್ಲಿಮರ ಕುಟುಂಬಗಳ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.

ಈದುಲ್ ಅಝ್ ಹಾ ಸಂದರ್ಭ ಬಲಿ ನೀಡುವುದಕ್ಕಾಗಿ ಎರಡು ಎಮ್ಮೆಗಳನ್ನು ತರಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಗುಂಪೊಂದು ದಾಳಿ ನಡೆಸಿದೆ.

“ಅವರು ಮೊದಲು ಎಮ್ಮೆಗಳನ್ನು ಎಳೆದುಕೊಂಡು ಹೋಗಲು ಪ್ರಯತ್ನಿಸಿದರು. ನಾವು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ನಮಗೆ ಇದನ್ನು ಮಾರಿ ಎಂದವರು ಹೇಳಿದರು. ಆದರೆ ನಾವು ಇದನ್ನು ನಿರಾಕರಿಸಿ ಈದುಲ್ ಅಝ್ ಹಾ ಹಿನ್ನೆಲೆಯಲ್ಲಿ ನಾವಿದನ್ನು ಖರೀದಿಸಿದ್ದೇವೆ” ಎಂದೆವು ಎನ್ನುತ್ತಾರೆ ಶಾಕಿರ್ ಅಹ್ಮದ್.

“ಆನಂತರ ಅವರು ಬೆದರಿಕೆ ಹಾಕಲಾರಂಭಿಸಿದರು. ಬಲಿದಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರು ಎಚ್ಚರಿಸಿದರು. ಸಮಸ್ಯೆಯಾಗಬಾರದು ಎಂಬ ನಿಟ್ಟಿನಲ್ಲಿ ನಾವು ಎಮ್ಮೆಗಳನ್ನು ವಾಪಸ್ ಮಾರುಕಟ್ಟೆಗೆ ಕೊಟ್ಟು ಬರುತ್ತೇವೆ ಎಂದು ಅವರಿಗೆ ಭರವಸೆ ನೀಡಿದೆವು. ಆದರೆ ಸುಮಾರು 5 ಗಂಟೆಯ ಹೊತ್ತಿಗೆ ನಾವು ಎಮ್ಮೆಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗುವುದಕ್ಕೂ ಮೊದಲು ಆಗಮಿಸಿದ ಸುಮಾರು 15-20 ಮಂದಿಯ ತಂಡ ನಮ್ಮ ಮೇಲೆ ದಾಳಿ ನಡೆಸಿತು. ಇಬ್ಬರು ಮಹಿಳೆಯರೊಂದಿಗೆ ಅವರು ಅಸಭ್ಯವಾಗಿ ವರ್ತಿಸಿದರು” ಎಂದು ಮತ್ತೋರ್ವ ರೋಹಿಂಗ್ಯ ಮುಹಮ್ಮದ್ ಜಮೀಲ್ ಹೇಳಿದ್ದಾರೆ.

ಇಷ್ಟೇ ಅಲ್ಲದೆ ದುಷ್ಕರ್ಮಿಗಳು ನಾಲ್ವರು ರೋಹಿಂಗ್ಯನ್ನರನ್ನು ಕರೆದುಕೊಂಡು ಹೋಗಿ ಅಜ್ಞಾತ ಸ್ಥಳದಲ್ಲಿ ಲಾಠಿ ಹಾಗೂ ರಾಡ್ ಗಳಿಂದ ದಾಳಿ ನಡೆಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಕೊಲ್ಲಲಾಗುವುದು ಎಂದೂ ಅವರು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಈ ಬಗ್ಗೆ ಎಫ್ ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News