ಒಲಿಂಪಿಯನ್ ರಾಜ್ಯವರ್ಧನ್ ನೂತನ ಕ್ರೀಡಾ ಸಚಿವ
ಹೊಸದಿಲ್ಲಿ, ಸೆ.3: ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ಮಾಜಿ ಶೂಟಿಂಗ್ ಪಟು ರಾಜ್ಯವರ್ಧನ್ ಸಿಂಗ್ ರಾಥೋರ್ ರವಿವಾರ ಕೇಂದ್ರ ಮಂತ್ರಿಮಂಡಲದ ವಿಸ್ತರಣೆ ಹಾಗೂ ಪುನಾರಚನೆಯ ವೇಳೆ ಕ್ರೀಡಾ ಖಾತೆ ಗಿಟ್ಟಿಸಿಕೊಂಡಿದ್ದಾರೆ.
ಈತನಕ ಕ್ರೀಡಾ ಸಚಿವರಾಗಿದ್ದ ವಿಜಯ್ ಗೋಯೆಲ್ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ.
47ರ ಹರೆಯದ ರಾಥೋರ್ ಈವರೆಗೆ ಮಾಹಿತಿ ಹಾಗೂ ಪ್ರಸಾರ ಖಾತೆಯ ಸಹಾಯಕ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಕರ್ನಲ್ ರಾಥೋರ್ 1990ರಲ್ಲಿ ಮೊದಲ ಬಾರಿ ಶೂಟಿಂಗ್ ಕ್ರೀಡೆಗೆ ಕಾಲಿಟ್ಟಿದ್ದರು. ಕೆಲವು ವರ್ಷಗಳ ಬಳಿಕ 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಜಯಿಸಿದ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದರು. ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡುವ ಮೊದಲು 2003ರಲ್ಲಿ ಸಿಡ್ನಿಯಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
ಅಥೆನ್ಸ್ ಗೇಮ್ಸ್‌ಗೆ ಮೊದಲು ದಿಲ್ಲಿಯ ತುಘಲಕ್‌ಬಾದ್ ಶೂಟಿಂಗ್ ರೇಂಜ್‌ನಲ್ಲಿ ಎರಡು ವರ್ಷಗಳ ಕಾಲ ಅಭ್ಯಾಸ ನಡೆಸಿದ್ದರು.
ಸೈನಿಕರ ಕುಟುಂಬದಲ್ಲಿ ಜನಿಸಿದ್ದ ರಾಥೋರ್ ರಾಷ್ಟ್ರೀಯ ರಕ್ಷಣಾ ಅಕಾಡಮಿಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಭಾರತೀಯ ಸೇನೆಯಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದ ರಾಥೋರ್ 2013ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. 2014ರಲ್ಲಿ ಮೋದಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದಾಗ ಮಾಹಿತಿ ಹಾಗೂ ಪ್ರಸಾರ ಇಲಾಖೆಯ ಸಹಾಯಕ ಸಚಿವರಾಗಿ ಅಧಿಕಾರವಹಿಸಿಕೊಂಡಿದ್ದರು.