'ಅಲ್ಲಾ ವಾಲಾ ಬಕ್ರಾ' ಗೆ ಕೋಟಿ ರೂ. ಬೆಲೆ ಇಟ್ಟವನಿಗೆ ಏನಾಯಿತು ನೋಡಿ

Update: 2017-09-03 14:53 GMT

ಹೊಸದಿಲ್ಲಿ, ಸೆ.3: ಕಂದು, ಬಿಳಿ ಬಣ್ಣ ಮಿಶ್ರಿತ ಈ ಆಡನ್ನು ನೋಡಿದವರು ಒಂದು ಕ್ಷಣ ಹೌಹಾರಿದ್ದರು. ಮಾರುಕಟ್ಟೆಗೆ ಬಕ್ರೀದ್ ಸಂದರ್ಭ ಬಂದಿದ್ದ ಈ ಆಡನ್ನು ನೋಡುವವರಿದ್ದರೇ ಹೊರತು ಯಾರೂ ಖರೀದಿಸಲು ಮುಂದಾಗಲಿಲ್ಲ. ಇದಕ್ಕೆ ಕಾರಣ ಇದರ ಮಾಲಕ ನಿಗದಿಪಡಿಸಿದ್ದ ಬೆಲೆ.

ಕಂದು ಬಿಳಿ ಮಿಶ್ರಿತ ಈ ಆಡಿನ ಮೇಲೆ ಅರೆಬಿಕ್ ಅಕ್ಷರದಲ್ಲಿ ‘ಅಲ್ಲಾಹ್’ ಎಂದು ಬರೆದಿದೆ ಎನ್ನುವ ಈ ಆಡಿನ ಮಾಲಕ ಗೋಪಾಲ್ ರಾವ್ ಹಾಗು ಆತನ ಪುತ್ರ ಕಪೀಲ್ ಸೊಹೈಲ್ ಇದಕ್ಕೆ 1,00,00,786 ರೂ.ಗಳನ್ನು ನಿಗದಿಪಡಿಸಿದ್ದು, ‘ಅಲ್ಲಾ ವಾಲಾ ಬಕ್ರಾ’ ಎಂದು ಹೆಸರಿಟ್ಟಿದ್ದ. ಆದರೆ ಇದ್ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಮಾರುಕಟ್ಟೆಯ ಕೊನೆಯ ಗಂಟೆಯವರೆಗೂ ಯಾರಾದರೂ ಖರೀದಿಸಲು ಮುಂದೆ ಬರಬಹುದು ಎಂದು ಕಾದವರಿಗೆ ನಿರಾಶೆಯಾಗಿತ್ತು.

“ನೂರಾರು ಜನರು ನಮ್ಮ ಆಡನ್ನು ನೋಡಿದರು. ಆದರೆ ಯಾರಲ್ಲೂ ಅದನ್ನು ಖರೀದಿಸುವಷ್ಟು ಹಣವಿರಲಿಲ್ಲ” ಎಂದು ಗೋಪಾಲ್ ರಾವ್ ಹೇಳುತ್ತಾನೆ.

ಆಡನ್ನು ನೋಡಲು ಬಂದ ಪ್ರತಿಯೊಬ್ಬರಿಗೂ ‘ಅಲ್ಲಾಹ್’ ಎಂದು ಬರೆದಿದೆ ಎಂದು ವಿವರಿಸಿದರೂ ಯಾರೂ ಖರೀದಿಸಲು ಧೈರ್ಯ ತೋರಿಸಲಿಲ್ಲ. ಇದರಿಂದಾಗಿ 1 ಕೋಟಿ ರೂ. ಎಂದು ನಿಗದಿಯಾಗಿದ್ದ ಈ ಆಡಿನ ಮೌಲ್ಯವನ್ನು 51 ಲಕ್ಷ ಎಂದು ನಿಗದಿಪಡಿಸಲಾಯಿತು. ಆದರೆ ಇದ್ಯಾವುದೂ ಪ್ರಯೋಜನಕ್ಕೆ ಬಾರದೆ ತಂದೆ ಮಗ ಇಬ್ಬರೂ ‘ಬಂದ ದಾರಿಗೆ ಸುಂಕವಿಲ್ಲ’ ಎಂದು ಆಡಿನೊಂದಿಗೆ ಮನೆಗೆ ಹಿಂದಿರುಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News