ಅನ್ಯಗ್ರಹ ಜೀವಿಗಳ ಸುಳಿವು ಪತ್ತೆ ?
►ಭೂಮಿಯಿಂದ 3 ಶತಕೋಟಿ ಬೆಳಕಿನ ವರ್ಷದಾಚೆಯಿಂದ ಬಂದ ಸಿಗ್ನಲ್
►ಅನ್ಯಗ್ರಹ ಜೀವಿಗಳ ಅನ್ವೇಷಣೆಗೆ ಹೊಸ ಆಯಾಮ
ಲಂಡನ್,ಸೆ.2: ಅನ್ಯಗ್ರಹದ ಜೀವಿಗಳಿಗಾಗಿ ಅನ್ವೇಷಣೆ ನಡೆಸುತ್ತಿರುವ ವಿಜ್ಞಾನಿಗಳ ತಂಡವೊಂದು ಭೂಮಿಯಿಂದ ಬರೋಬ್ಬರಿ 3 ಶತಕೋಟಿ ಬೆಳಕಿನ ವರ್ಷಗಳಾಚೆ ಇರುವ ತಾರಾಸಮೂಹದಿಂದ ಹೊರಹೊಮ್ಮಿರುವ ಕೆಲವೊಂದು ನಿಗೂಢ ಸಂಕೇತಗಳನ್ನು ದಾಖಲಿಸಿಕೊಂಡಿದೆ. ಖ್ಯಾತ ಖಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಸಹಸಂಸ್ಥಾಪಕರಾಗಿರುವ ಈ ಮಹತ್ವಕಾಂಕ್ಷಿ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ವಿಜ್ಞಾನಿಯೊಬ್ಬರು ಈ ಕುತೂಹಲಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.ಇದರೊಂದಿಗೆ ಅನ್ಯಗ್ರಹದ ಜೀವಿಗಳ ಅಸ್ತಿತ್ವದ ಕುರಿತ ಶೋಧನೆಗಳಿಗೆ ಹೊಸ ಆಯಾಮ ದೊರೆತಿದೆ.
ಬಾಹ್ಯಾಕಾಶದಿಂದ ಬಂದಿರುವ ಅತಿ ವೇಗದ ರೇಡಿಯೋ ಸಿಗ್ನಲ್ (ಎಫ್‌ಆರ್‌ಬಿ)ಗಳನ್ನು ಗ್ರಹಿಸಲು ಯಶಸ್ವಿಯಾಗುವ ಮೂಲಕ ತಮ್ಮ ಉಪಕರಣವು ಚೆನ್ನಾಗಿ ಕೆಲಸ ಮಾಡುತ್ತಿದೆಯೆಂಬುದನ್ನು ಸಾಬೀತುಪಡಿಸಿದೆಯೆಂದು ‘‘ಬ್ರೇಕ್ ಥ್ರೂ ಲಿಸನ್’ ಯೋಜನೆಯ ವಿಜ್ಞಾನಿ ವಿಶಾಲ್ ಗಜ್ಜಾರ್ ತಿಳಿಸಿದ್ದಾರೆ. ಆದಾಗ್ಯೂ, ಈ ನಿಗೂಢ ರೇಡಿಯೋ ಸಿಗ್ನಲ್‌ಗಳು ಎಲ್ಲಿಂದ ಬರುತ್ತಿವೆಯೆಂಬ ಬಗ್ಗೆ ನಮಗೆ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ’’ ಎಂದವರು ಹೇಳಿದ್ದಾರೆ.
ಒಂದು ವೇಳೆ ಇಂತಹ ಸಂಕೇತಗಳನ್ನು ಉತ್ಪತ್ತಿ ಮಾಡಲು ಸಾಧ್ಯವಿರುವಂತಹ ಜೀವಿಗಳಿಂದ ಅವು ಬಂದಿರಲೂಬಹುದು ಎಂದು ಗಜ್ಜರ್ ಅಭಿಪ್ರಾಯಿಸಿದ್ದಾರೆ. ಆದರೆ ಬೌದ್ಧಿಕವಾಗಿ ಮಾನವರಿಗಿಂತಲೂ ಅತ್ಯಂತ ಮುಂದುವರಿದಿರುವ ಜೀವಿಗಳಿಂದ ಈ ಸಂಕೇತಗಳು ಬಂದಿರಬಹುದೆಂದು ನಾನು ಭಾವಿಸಲಾರೆ’’ ಎಂದವರು ಅಭಿಪ್ರಾಯಿಸಿದ್ದಾರೆ.
2015ರಲ್ಲಿ ಸ್ಟೀಫನ್ ಹಾಕಿಂಗ್ ಹಾಗೂ ರಶ್ಯದ ಬಿಲಿಯಾಧೀಶ ಉದ್ಯಮಿ ಯೂರಿ ಮಿಲ್ನೆರ್ ಜಂಟಿಯಾಗಿ ‘ಬ್ರೇಕ್‌ಥ್ರೂ ಲಿಸನ್’ ಯೋಜನೆಯನ್ನು ಆರಂಭಿಸಿದ್ದಾರೆ. 100 ದಶಲಕ್ಷ ಡಾಲರ್ ವೆಚ್ಚದ ಈ ಯೋಜನೆಯಲ್ಲಿ ಖಗೋಳ ವಿಜ್ಞಾನಿಗಳ ತಂಡಗಳು ಅತ್ಯಂತ ಶಕ್ತಿಶಾಲಿಯಾದ ಟೆಲಿಸ್ಕೋಪ್‌ಗಳು ಹಾಗೂ ಇತರ ಅತ್ಯಾಧುನಿಕ ಉಪಕರಣಗಳನ್ನು ಬಳಸಿಕೊಂಡು ಬಾಹ್ಯಾಕಾಶದಲ್ಲಿ ಜೀವಿಗಳ ಅಸ್ತಿತ್ವದ ಕುರಿತು ಶೋಧನೆಯನ್ನು ನಡೆಸುತ್ತಿವೆ.
10 ವರ್ಷಗಳ ಅವಧಿಯ ಈ ಕಾರ್ಯಕ್ರಮದಲ್ಲಿ ವಿಜ್ಞಾನಿಗಳು ಆಕಾಶಗಂಗೆ ಸೇರಿದಂತೆ 10 ಲಕ್ಷಕ್ಕೂ ಅಧಿಕ ನಕ್ಷತ್ರಗಳ ಸಮೀಕ್ಷೆ ನಡೆಸಲಿದ್ದಾರೆ. ಭೂಮಿಗೆ ಸನಿಹದ 100 ತಾರಾಸಮೂಹದಿಂದ ಬರಬಹುದಾದ ಸಂಕೇತಗಳನ್ನು 10 ವಿಭಿನ್ನ ತರಂಗಾಂತರಗಳಲ್ಲಿ ಆಲಿಸಲು ಅವು ಪ್ರಯತ್ನಿಸುತ್ತಿವೆ.