"ಗುಂಪಿನಿಂದ ದೂರವಾದ ಕೋತಿಯನ್ನು ಯಾರೂ ಕ್ಯಾರೇ ಎನ್ನುವುದಿಲ್ಲ": ನಿತೀಶ್ ರನ್ನು ಕುಟುಕಿದ ಲಾಲೂ
ಪಾಟ್ನ, ಸೆ.3: ಗುಂಪಿನಿಂದ ದೂರವಾದ ಕೋತಿಯನ್ನು ಯಾರೂ ಕ್ಯಾರೇ ಎನ್ನುವುದಿಲ್ಲ... ಹೀಗೆಂದು ಹಿಂದಿಯಲ್ಲಿ ಟ್ವೀಟ್ ಮಾಡುವ ಮೂಲಕ ಆರ್‌ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್ ಜೆಡಿಯು ಮುಖಂಡ ನಿತೀಶ್‌ರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
ಕೇಂದ್ರ ಸಚಿವ ಸಂಪುಟದ ಪುನರಚನೆ ಸಂದರ್ಭ ಜೆಡಿಯು ಪಕ್ಷವನ್ನು ಬಿಜೆಪಿ ನಿರ್ಲಕ್ಷಿಸಿದೆ. ಹೊಸದಾಗಿ ಹೊಲಿಸಿದ ಕುರ್ತಾ-ಪೈಜಾಮ ಮತ್ತು ಬುಂಡಿ(ಸ್ಲೀವ್‌ಲೆಸ್ ಜಾಕೆಟ್) ಧರಿಸಿಕೊಂಡು , ಮೋದಿಯ ಸಂಪುಟದಲ್ಲಿ ಸ್ಥಾನ ದೊರಕಬಹುದೆಂಬ ಆಸೆಯಲ್ಲಿ ಜೆಡಿಯು ಸದಸ್ಯರು ದಿಲ್ಲಿಗೆ ದೌಡಾಯಿಸಿದ್ದರು. ಆದರೆ ಅವರನ್ನು ಅಲ್ಲಿ ಕೇಳುವವರೇ ಇರಲಿಲ್ಲ ಎಂದು ಲಾಲೂ ವ್ಯಂಗ್ಯವಾಡಿದ್ದಾರೆ. ಜೆಡಿಯು ಬಿಹಾರದಲ್ಲಿ ಕಾಂಗ್ರೆಸ್ ಶಾಸಕರಿಗೆ ಆಮಿಷವೊಡ್ಡಿ ಅವರನ್ನು ಸೆಳೆದುಕೊಂಡು , ಬಿಜೆಪಿಗೆ ಕೈಕೊಡಲು ಸಂಚು ಹೂಡಿದೆ ಎಂದು ಪ್ರಧಾನಿ ಮೋದಿ ಬಿಜೆಪಿಯ ಪ್ರಮುಖರಿಗೆ ವರದಿ ನೀಡಿದ್ದಾರೆ ಎಂದು ಲಾಲೂಪ್ರಸಾದ್ ಹೇಳಿದರು.
ಬಕ್ಸರ್ ಕ್ಷೇತ್ರದ ಸಂಸದ ಅಶ್ವಿನಿ ಕುಮಾರ್ ಚೌಬೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡಿರುವುದನ್ನು ಟೀಕಿಸಿದ ಲಾಲೂಪ್ರಸಾದ್, ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಹಾಗೂ ಸಚಿವ ಗಿರಿರಾಜ್ ಸಿಂಗ್‌ರಂತೆಯೇ ಚೌಬೆ ಕೂಡಾ 1,300 ಕೋಟಿ ರೂ. ಮೊತ್ತದ ಸೃಜನ್ ಫಂಡ್ ವರ್ಗಾವಣೆ ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.