ಬ್ಯಾಂಕ್ ಸಿಬ್ಬಂದಿಗಳ ವೈಯಕ್ತಿಕ ಮಾಹಿತಿ ಆರ್‌ಟಿಐಯಡಿ ಪಡೆಯುವಂತಿಲ್ಲ: ಸುಪ್ರೀಂ
ಹೊಸದಿಲ್ಲಿ, ಸೆ.3: ಬ್ಯಾಂಕ್ ಸಿಬ್ಬಂದಿಗಳಿಂದ ವ್ಯಕ್ತಿಯೋರ್ವ ‘ಸ್ವಹಿತಾಸಕ್ತಿ’ಯ ಉದ್ದೇಶದಿಂದ ವೈಯಕ್ತಿಕ ಮಾಹಿತಿಯನ್ನು ಪಡೆಯುವುದು ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ)ಯಡಿ ಬರುವುದಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಜನವರಿ 2002ರಿಂದ ಜನವರಿ 2006ರವರೆಗೆ ತನ್ನ ಎಲ್ಲಾ ಗುಮಾಸ್ತ ವರ್ಗದ ನೇಮಕಾತಿ ಹಾಗೂ ವರ್ಗಾವಣೆಯ ಸಂಪೂರ್ಣ ವಿವರವನ್ನು ಆರ್‌ಟಿಐ ಅಡಿ ನೀಡಬೇಕೆಂದು ಕೇರಳ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕೆನರಾ ಬ್ಯಾಂಕ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಸೂಚನೆ ನೀಡಿದೆ. ಕೆನರಾ ಬ್ಯಾಂಕ್‌ನಲ್ಲಿ ಗುಮಾಸ್ತನಾಗಿ ಕಾರ್ಯನಿರ್ವಹಿಸಿದ್ದ ವ್ಯಕ್ತಿಯೋರ್ವ, 2002ರಿಂದ 2006ರವರೆಗೆ ಬ್ಯಾಂಕ್‌ನಲ್ಲಿ ಗುಮಾಸ್ತರಾಗಿ ನೇಮಕಗೊಂಡವರ ಬಗ್ಗೆ, ಅವರು ಎಲ್ಲಿ ಕೆಲಸಕ್ಕೆ ಸೇರಿದ್ದಾರೆ, ಅವರು ಎಂದು ಕೆಲಸಕ್ಕೆ ಸೇರಿದ್ದಾರೆ ಇತ್ಯಾದಿ ವಿವರವನ್ನು ಒದಗಿಸಬೇಕೆಂದು ಮಾಹಿತಿ ಹಕ್ಕು ಕಾಯ್ದೆಯಡಿ ಬ್ಯಾಂಕಿನ ಸಾರ್ವಜನಿಕ ಸಂಪರ್ಕಾಧಿಕಾರಿ(ಪಿಐಒ)ಗೆ ಸರ್ಜಿ ಸಲ್ಲಿಸಿದ್ದ. ಆದರೆ ಈ ಮಾಹಿತಿ ಗೌಪ್ಯವಾಗಿರುವ ಕಾರಣ ಇದನ್ನು ಬಹಿರಂಗಗೊಳಿಸಲು ತನಗೆ ಸಾಧ್ಯವಿಲ್ಲ ಎಂದು ಪಿಐಒ ತಿಳಿಸಿದ್ದರು. ಬಳಿಕ ಆ ವ್ಯಕ್ತಿ ಕೇಂದ್ರೀಯ ಮಾಹಿತಿ ಆಯೋಗದ ಮೊರೆ ಹೋಗಿದ್ದ. ಈ ಸಂದರ್ಭ ಮಾಹಿತಿ ಒದಗಿಸುವಂತೆ ಆಯೋಗವು ಬ್ಯಾಂಕ್‌ಗೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಬ್ಯಾಂಕ್‌ನವರು ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ತಳ್ಳಿಹಾಕಿದ್ದ ಹೈಕೋರ್ಟ್, ಕೇಂದ್ರೀಯ ಮಾಹಿತಿ ಆಯೋಗದ ಆದೇಶ ಪಾಲಿಸುವಂತೆ ಸೂಚಿಸಿತ್ತು.
ಅರ್ಜಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗಿರುವ ಕಾರಣ ಈ ವಿವರವನ್ನು ಒದಗಿಸುವಂತೆ ಕೇರಳ ಹೈಕೋರ್ಟ್ 2013ರಲ್ಲಿ ಕೆನರಾ ಬ್ಯಾಂಕ್‌ಗೆ ಆದೇಶ ನೀಡಿತ್ತು. ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.
ಬ್ಯಾಂಕ್‌ನಲ್ಲಿ ಸಿಬ್ಬಂದಿಯಾಗಿದ್ದ ವ್ಯಕ್ತಿಯೋರ್ವ ಸಲ್ಲಿಸಿರುವ ಅರ್ಜಿ ‘ವೈಯಕ್ತಿಕ’ವಾಗಿರುವ ಕಾರಣ ಈ ಮಾಹಿತಿಯನ್ನು ಆರ್‌ಟಿಐ ಕಾಯ್ದೆಯಡಿ ಬಹಿರಂಗಗೊಳಿಸುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಆರ್.ಕೆ.ಅಗರ್‌ವಾಲ್ ಮತ್ತು ಎ.ಎಂ.ಸಪ್ರೆ ಅವರನ್ನೊಳಗೊಂಡ ನ್ಯಾಯಪೀಠ ಸೂಚಿಸಿದೆ.
ಈ ವ್ಯಕ್ತಿ ಸಲ್ಲಿಸಿರುವ ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ಬದಲು ವೈಯಕ್ತಿಕ ಹಿತಾಸಕ್ತಿ ಅಡಗಿದೆ. ಅಲ್ಲದೆ ಈ ವ್ಯಕ್ತಿಗೆ ಮಾಹಿತಿ ಒದಗಿಸುವುದು ಸಾರ್ವಜನಿಕ ಹಿತಾಸಕ್ತಿಗೆ ಹೇಗೆ ಪೂರಕವಾಗಿದೆ ಎಂಬುದನ್ನು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿಲ್ಲ. ಆದ್ದರಿಂದ ಇದನ್ನು ಮಾಹಿತಿ ಹಕ್ಕಿನ ಕಾಯ್ದೆಯಿಂದ ಹೊರತುಗೊಳಿಸಬಹುದು ಎಂದು ಸುಪ್ರೀಂಕೋರ್ಟ್‌ನ ನ್ಯಾಯಪೀಠ ಅಭಿಪ್ರಾಯಪಟ್ಟಿದ್ದು ಹೈಕೋರ್ಟ್ ಹಾಗೂ ಕೇಂದ್ರೀಯ ಮಾಹಿತಿ ಆಯೋಗದ ಆದೇಶವನ್ನು ತಳ್ಳಿಹಾಕಿದೆ.