ಇದು ಬಿಜೆಪಿಯ ಪುನಾರಚನೆ ಹೊರತು ಎನ್ ಡಿ ಎಯದ್ದಲ್ಲ : ಶಿವಸೇನೆ
ಹೊಸದಿಲ್ಲಿ, ಸೆ. 3: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಸಚಿವ ಸಂಪುಟವನ್ನು ಪುನಾರಚಿಸಿದ್ದಾರೆ. ಇದರಿಂದ ರಾಜೀನಾಮೆ ನೀಡುವಂತೆ ಕೋರಲಾದ ಸಚಿವರಲ್ಲಿ ಮಾತ್ರ ಅಸಮಾಧಾನ ಹೊಗೆಯಾಡಿರುವುದಲ್ಲ. ಬದಲಾಗಿ ಲಾಭ ಪಡೆಯದ ಮಿತ್ರ ಪಕ್ಷಗಳು ಕೂಡ ಅಸಮಾಧಾನಗೊಂಡಿವೆ.
ಎರಡು ವಾರಗಳ ಹಿಂದೆ ಜೆಡಿಯು ನಾಯಕ ನಿತೀಶ್ ಕುಮಾರ್ ಮಹಾಘಟಬಂಧನ ತೊರೆದು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ಈಗ ಸಂಪುಟ ಪುನಾರಚನೆ ಆಗುತ್ತಿದೆ. ಆದರೆ, ಇದುವರೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ನಿತೀಶ್ ಕುಮಾರ್ ಅವರಿಗೆ ಕರೆ ಬಂದಿಲ್ಲ. ಇದರಿಂದ ನಿತೀಶ್ ಕುಮಾರ್ ನಿರಾಶರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನು ನಿರಾಕರಿಸಿರುವ ಬಿಜೆಪಿ, ಕೇಂದ್ರ ಸಂಪುಟವನ್ನು ಶೀಘ್ರದಲ್ಲೇ ಇನ್ನೊಮ್ಮೆ ವಿಸ್ತರಣೆ ಅಥವಾ ಪುನಾರಚನೆ ಮಾಡಲಾಗುವುದು. ಈ ಸಂದರ್ಭ ನಿತೀಶ್ ಕುಮಾರ್ ಅವರ ಪಕ್ಷ ಸೇರಿದಂತೆ ಮಿತ್ರ ಪಕ್ಷಗಳಿಗೆ ಅವಕಾಶ ನೀಡಲಾಗುವುದು ಎಂದಿದೆ.
ಬಿಜೆಪಿಯ ಇನ್ನೊಂದು ಮಿತ್ರ ಪಕ್ಷವಾದ ಶಿವಸೇನೆ 18 ಸಂಸದರನ್ನು ಹೊಂದಿದೆ. ತನ್ನ ಪಕ್ಷದ ಸಚಿವ ಸ್ಥಾನದ ಖೋಟಾವನ್ನು ಹೆಚ್ಚಿಸಿಲ್ಲ ಯಾಕೆ ಎಂದು ಪ್ರಶ್ನಿಸಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ನಮಗೆ ಅಧಿಕಾರದ ಹಸಿವಿಲ್ಲ ಎಂದಿದ್ದಾರೆ. 9 ಮಂದಿ ಸಚಿವರ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮವನ್ನು ಶಿವಸೇನೆ ಬಹಿಷ್ಕರಿಸಿದೆ. ಇದು ಬಿಜೆಪಿಯ ಪುನಾರಚನೆ ಹೊರತು ಎನ್‌ಡಿಎಯ ಪುನಾರಚನೆ ಅಲ್ಲ ಎಂದು ಶಿವಸೇನೆಯ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.