×
Ad

ಹೈದರಾಬಾದ್ ನಲ್ಲಿ ಈವರೆಗಿನ ಅತ್ಯಂತ ಸ್ವಚ್ಛ ಬಕ್ರೀದ್ ಆಚರಣೆ

Update: 2017-09-04 18:32 IST
ಸಾಂದರ್ಭಿಕ ಚಿತ್ರ

ಹೈದರಾಬಾದ್,ಸೆ.4: ತ್ಯಾಗ ಹಾಗೂ ಬಲಿದಾನದ ಸಂಕೇತವಾದ ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ಈ ಬಾರಿ ಹೈದರಾಬಾದ್‍ನಲ್ಲಿ ಹಲವು ದಶಕಗಳಲ್ಲೇ ಅತ್ಯಂತ ಸ್ವಚ್ಛ ಬಕ್ರೀದ್ ಎನಿಸಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಧಾರ್ಮಿಕ ಚಿಂತಕರು ಮತ್ತು ಮುಸ್ಲಿಂ ಸಮಾಜವಿಜ್ಞಾನಿಗಳ ಅವಿರತ ಪ್ರಯತ್ನ. ನಗರದ ಮುಸ್ಲಿಂ ಪ್ರಾಬಲ್ಯದ ಈ ಭಾಗದಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದ್ದರ ಫಲವಾಗಿ ಈ ಕಾರ್ಯಸಾಧನೆಯಾಗಿದೆ. ಅದರಲ್ಲೂ ಮುಖ್ಯವಾಗಿ ಮುಸಿ ನದಿಯ ದಕ್ಷಿಣ ಭಾಗದ ಬಗ್ಗೆ ವಿಶೇಷ ಗಮನ ನೀಡಲಾಗಿತ್ತು.

ಈ ಹಿಂದಿನ ವರ್ಷಗಳಲ್ಲಿ ಈ ಭಾಗ ಬಕ್ರೀದ್ ಬಳಿಕ ವಾರಗಳ ಕಾಲ ಗಬ್ಬು ನಾರುತ್ತಿತ್ತು. ಆದರೆ ಈ ಬಾರಿ ಬಲಿ ನೀಡಿದ ಪ್ರಾಣಿಗಳ ಅಳಿದುಳಿದ ಅವಶೇಷಗನ್ನು ನಿಗದಿತ ಜಾಗಗಳಲ್ಲೇ ವಿಲೇವಾರಿ ಮಾಡಲಾಗಿದೆ. ಬಳಿಕ ವೈಜ್ಞಾನಿಕವಾಗಿ ಇದನ್ನು ಕೇಂದ್ರೀಕೃತ ತ್ಯಾಜ್ಯ ವಿಲೇವಾರಿ ಕೇಂದ್ರಗಳ ಮೂಲಕ ಜಿಎಚ್‍ಎಂಸಿ ಮೈದಾನದಲ್ಲಿ ನಿರ್ವಹಿಸಲಾಗಿದೆ.

ನಗರವನ್ನು ಸ್ವಚ್ಛವಾಗಿಡಲು ಈ ವಿನೂತನ ಪ್ರಯತ್ನ ಮಾಡಲಾಗಿತ್ತು. ವ್ಯಾಪಕವಾಗಿ ರೋಗಗಳು ಹರಡುವುದು ಹಾಗೂ ಔಷಧ ಪ್ರತಿರೋಧದ ಹುಳಗಳು ಹೆಚ್ಚಾಗಿ ಹುಟ್ಟಿಕೊಳ್ಳುವುದನ್ನು ತಪ್ಪಿಸಲು ಈ ಪ್ರಯತ್ನ ನಡೆಸಲಾಗಿತ್ತು.

ಈ ಸ್ವಚ್ಛತಾ ಜಾಗೃತಿ ಆಂದೋಲನದ ನೇತೃತ್ವ ವಹಿಸಿದ್ದು ಸ್ವತಃ ಉಲೇಮಾ. ಸಾಮಾನ್ಯವಾಗಿ ಬಲಿ ನೀಡಲಾದ ಪ್ರಾಣಿಗಳ ಚರ್ಮವನ್ನು ಪ್ರತಿ ಬಕ್ರೀದ್‍ನಲ್ಲಿ ಮದರಸಗಳಿಗೆ ಹಾಗೂ ಸಮಾಜಸೇವಾ ಸಂಸ್ಥೆಗಳಿಗೆ ನೀಡಲಾಗುತ್ತಿತ್ತು. ಇದನ್ನು ಚರ್ಮ ಮಾರಾಟಗಾರರಿಗೆ ಮಾರಾಟ ಮಾಡಿ ಬಂದ ಹಣವನ್ನು ಮದರಸ ನಿರ್ವಹಣೆಗೆ ಬಳಸಲಾಗುತ್ತಿತ್ತು.

ಆದರೆ ಈ ಬಾರಿ ಒಂದು ಕುರಿ ಚರ್ಮದ ಬೆಲೆ 400 ರೂಪಾಯಿಯಿಂದ 30 ರೂಪಾಯಿಗೆ ಕುಸಿದಿದೆ, ಸ್ವಚ್ಛತಾ ಆಂದೋಲನದ ಭಾಗವಾಗಿ ಎಲ್ಲ ಮಸೀದಿಗಳ ಇಮಾಮ್‍ಗಳು ಮುಸ್ಲಿಂ ಬಾಂಧವರಲ್ಲಿ ರಸ್ತೆಗಳಲ್ಲಿ ಪ್ರಾಣಿ ತ್ಯಾಜ್ಯ ಎಸೆಯದಂತೆ ಮನವಿ ಮಾಡಿದ್ದರು. ಕೆಲ ಉದ್ಯಮಶೀಲ ಯುವಕರು ವಿಡಿಯೊ ಫಿಲಂಗಳನ್ನು ಸಿದ್ಧಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಪಡಿಸಿದ್ದರು. ಸ್ವಚ್ಛತೆಯ ಅಗತ್ಯತೆ ಬಗ್ಗೆ ಮನವರಿಕೆ ಮಾಡಿದ್ದರು.

ಮಳೆಗಾಲದಲ್ಲಿ ಈ ಬಾರಿ ಹಬ್ಬ ಬಂದಿರುವುದರಿಂದ, ವೈದ್ಯರು ಕೂಡಾ ಸಂಭಾವ್ಯ ಸೋಂಕುಗಳ ಬಗ್ಗೆ ಎಚ್ಚರಿಕೆ ನೀಡಿದ್ದರು. ಇದು ಪರಿಣಾಮಕಾರಿಯಾಗಿದ್ದು, ನಗರದಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಯಶಸ್ವಿಯಾಗಿದೆ ಎಂದು ತಮೀರ್ ಇ ಮಿಲ್ಲತ್ ಉಪಾಧ್ಯಕ್ಷ ಮೌಲಾನಾ ಜೈಯುದ್ದೀನ್ ನಯ್ಯಾರ್ ಹೇಳಿದ್ದಾರೆ.

ಹಬ್ಬದ ಮರುದಿನವಾದ ರವಿವಾರ ನಗರದ ಈ ಭಾಗದಲ್ಲಿ ಸುತ್ತುಹಾಕಿದಾಗ ಸ್ವಚ್ಛ ಪರಿಸರ ಕಂಡುಬಂದಿದೆ. ಪೌರಕಾರ್ಮಿಕರು ತ್ಯಾಜ್ಯ ಸಂಗ್ರಹಿಸಿ ಒಯ್ದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News