ದೇವದೂತನ ಬದಲು ಯಮದೂತನಾದ ಸರಕಾರ
ಮುಂಬೈ, ಸೆ.5: ಉತ್ತರಪ್ರದೇಶದ ಎರಡು ಆಸ್ಪತ್ರೆಗಳಲ್ಲಿ ಹಲವು ಮಕ್ಕಳು ಸಾವನ್ನಪ್ಪಿರುವ ಘಟನೆಯ ಕುರಿತು ಬಿಜೆಪಿ ನೇತೃತ್ವದ ಸರಕಾರವನ್ನು ತರಾಟೆಗೆತ್ತಿಕೊಂಡಿರುವ ಶಿವಸೇನೆ, ಉತ್ತರಪ್ರದೇಶದ ಆರೋಗ್ಯ ಸೇವೆ - ದೇವದೂತನಾಗುವ ಬದಲು ಯಮದೂತನಾಯಿತು ಎಂದು ಟೀಕಿಸಿದೆ.
ಸರಕಾರವೇ ಆಕ್ಸಿಜನ್‌ನಲ್ಲಿರುವಾಗ ರೋಗಿಗಳಿಗೆ ಆಕ್ಸಿಜನ್ ಪೂರೈಸಲು ಸಾಧ್ಯವೇ ಎಂದು ಶಿವಸೇನೆಯ ಮುಖವಾಣಿ ‘ಸಾಮ್ನ’ದ ಸಂಪಾದಕೀಯ ಲೇಖನದಲ್ಲಿ ಲೇವಡಿ ಮಾಡಲಾಗಿದೆ. ಸುಮಾರು 6 ವರ್ಷದ ಹಿಂದೆ ಪಶ್ಚಿಮ ಬಂಗಾಲದಲ್ಲಿ 15 ದಿನಗಳವಧಿಯಲ್ಲಿ 50ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಾಗ ಅಂದು ಮಮತಾ ಬ್ಯಾನರ್ಜಿ ಸರಕಾರವನ್ನು ಹಿಗ್ಗಾಮುಗ್ಗಾ ಟೀಕಿಸಿದ್ದ ಪಕ್ಷದ ಸರಕಾರವೇ ಇಂದು ಉತ್ತರಪ್ರದೇಶದಲ್ಲಿ ಅಧಿಕಾರದಲ್ಲಿದೆ. ಆಮ್ಲಜನಕ ಪೂರೈಕೆಯಲ್ಲಿ ಆಗಿರುವ ವ್ಯತ್ಯಯ ಮಕ್ಕಳ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಇದು ಉ.ಪ್ರದೇಶದಲ್ಲಿರುವ ಆರೋಗ್ಯಸೇವೆಯ ಗುಣಮಟ್ಟದ ಕುರಿತು ಬಹುದೊಡ್ಡ ಪ್ರಶ್ನಾರ್ಥಕ ಚಿಹ್ನೆ ಮೂಡಿಸುತ್ತಿದೆ ಎಂದು ಶಿವಸೇನೆ ಹೇಳಿದೆ.
ಸರಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ದಾಖಲಾಗುವವರು ಬಡ ಹಾಗೂ ಮಧ್ಯಮವರ್ಗದ ಜನತೆ. ಆಸ್ಪತ್ರೆಗಳಲ್ಲಿ ಒದಗಿಸಲಾಗುವ ಆರೋಗ್ಯ ಸೇವೆಯಿಂದ ತಾವು ಗುಣಮುಖರಾಗುವುದಾಗಿ ಅವರು ನಂಬಿರುತ್ತಾರೆ. ಆದರೆ ಉ.ಪ್ರದೇಶದಲ್ಲಿ ಈಗ ಆರೋಗ್ಯ ಸೇವೆಯೇ ಆಕ್ಸಿಜನ್‌ನಲ್ಲಿ ಇರುವ ಕಾರಣ ಪರಿಣಾಮಕಾರಿಯಾಗಿಲ್ಲ ಎಂದು ತಿಳಿಸಿರುವ ಸೇನೆ, ರಾಜ್ಯದಲ್ಲಿ ಸಾವಿನ ಸರಣಿ ಹಾಗೂ ಬಳಿಕ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವ ಪ್ರಕ್ರಿಯೆ ಇನ್ನೆಷ್ಟು ಬಾರಿ ನಡೆಯಲಿದೆ ಎಂದು ಸರಕಾರವನ್ನು ಪ್ರಶ್ನಿಸಿದೆ.