×
Ad

ಡೋಕ್ಲಾಮ್‌ನಂತಹ ಬಿಕ್ಕಟ್ಟು ಮರುಕಳಿಸಬಾರದು: ಮೋದಿ-ಜಿನ್ ಪಿಂಗ್ ಸಹಮತ

Update: 2017-09-05 20:09 IST

ಕ್ಸಿಯಾಮೆನ್,ಸೆ.5: ಮಂಗಳವಾರ ಇಲ್ಲಿ ಯಶಸ್ವಿ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು, ಭವಿಷ್ಯದಲ್ಲಿ ಉಭಯ ರಾಷ್ಟ್ರಗಳ ನಡುವೆ ಡೋಕ್ಲಾಮ್‌ನಂತಹ ಗಡಿ ಬಿಕ್ಕಟ್ಟುಗಳು ಪುನರಾವರ್ತನೆಗೊಳ್ಳಬಾರದು ಎನ್ನುವುದಕ್ಕೆ ಸಹಮತವನ್ನು ವ್ಯಕ್ತಪಡಿಸಿದರು.

ಸಿಕ್ಕಿಂ ಗಡಿ ವಿಭಾಗದ ಡೋಕ್ಲಾಮ್‌ನಲ್ಲಿ ಉಭಯ ಸೇನೆಗಳ ನಡುವೆ ಸೃಷ್ಟಿಯಾಗಿದ್ದ ಎರಡು ತಿಂಗಳಿಗೂ ಅಧಿಕ ಅವಧಿಯ ಬಿಕ್ಕಟ್ಟಿನ ಬಳಿಕ ಇದು ಮೋದಿ ಮತ್ತು ಜಿನ್ ಪಿಂಗ್ ನಡುವಿನ ಮೊದಲ ಮುಖಾಮುಖಿ ಮಾತುಕತೆಯಾಗಿದೆ. ಕೆಲವೇ ದಿನಗಳ ಹಿಂದೆ ಉಭಯ ರಾಷ್ಟ್ರಗಳು ಡೋಕ್ಲಾಮ್‌ನಿಂದ ತಮ್ಮ ಸೇನೆಗಳನ್ನು ವಾಪಸ್ ಕರೆಸಿಕೊಂಡಿದ್ದು, ವಿವಾದವೀಗ ತಣ್ಣಗಾಗಿದೆ.

ಒಂಭತ್ತನೇ ಬ್ರಿಕ್ಸ್ ಶೃಂಗಸಭೆ ಅಂತ್ಯಗೊಂಡ ಬಳಿಕ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ ಉಭಯ ನಾಯಕರು ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಯ್ದುಕೊಳ್ಳುವ ಅಗತ್ಯವನ್ನು ಚರ್ಚಿಸಿದರು.

ಜಿನ್ ಪಿಂಗ್ ಅವರೊಂದಿಗೆ ಭೇಟಿ ಸಂದರ್ಭದಲ್ಲಿ ಭಾರತ ಮತ್ತು ಚೀನಾ ನಡುವೆ ದ್ವಿಪಕ್ಷೀಯ ಸಂಬಂಧಗಳ ಕುರಿತು ಫಲದಾಯಕ ಮಾತುಕತೆಗಳನ್ನು ನಡೆಸಿದ್ದೇವೆ ಎಂದು ಮೋದಿ ಟ್ವೀಟಿಸಿದ್ದಾರೆ. ಜಿನ್ ಪಿಂಗ್ ಜೊತೆ ಭೇಟಿಯ ಬಳಿಕ ಮೋದಿ ಮ್ಯಾನ್ಮಾರ್‌ಗೆ ತೆರಳಿದರು.

ಚೀನಾ ಮತ್ತು ಭಾರತಗಳ ನಡುವೆ ಆರೋಗ್ಯಕರ ಮತ್ತು ಸ್ಥಿರ ಸಂಬಂಧಗಳು ಉಭಯ ರಾಷ್ಟ್ರಗಳ ಜನತೆಯ ಮೂಲಭೂತ ಹಿತಾಸಕ್ತಿಗಳಿಗೆ ಅನುಗುಣವಾಗಿವೆ ಎಂದು ಹೇಳಿದ ಜಿನ್ ಪಿಂಗ್,ಪರಸ್ಪರ ರಾಜಕೀಯ ನಂಬಿಕೆಯನ್ನು ಉತ್ತಮಗೊಳಿಸಲು,ಪರಸ್ಪರ ಲಾಭದಾಯಕ ಸಹಕಾರವನ್ನು ಉತ್ತೇಜಿಸಲು ಮತ್ತು ಚೀನಾ-ಭಾರತ ಸಂಬಂಧವನ್ನು ಸರಿಯಾದ ಮಾರ್ಗದಲ್ಲಿ ಮುಂದುವರಿಸಲು ಪಂಚತತ್ವಗಳ ಆಧಾರದಲ್ಲಿ ಭಾರತ ದೊಂದಿಗೆ ಶ್ರಮಿಸಲು ಚೀನಾ ಬಯಸಿದೆ ಎಂದು ತಿಳಿಸಿದರು.

ಮೋದಿ ಮತ್ತು ಜಿನ್ ಪಿಂಗ್ ನಡುವಿನ ಭೇಟಿಯು ರಚನಾತ್ಮಕವಾಗಿದ್ದು,ಮುನ್ನೋಟವನ್ನು ಹೊಂದಿತ್ತು ಎಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಎಸ್.ಜೈಶಂಕರ್ ಅವರು ತಿಳಿಸಿದರು.

ಉಭಯ ದೇಶಗಳ ನಡುವಿನ ನಂಬಿಕೆಯನ್ನು ಇನ್ನಷ್ಟು ಹೆಚ್ಚಿಸಲು ಮತ್ತು ಸದೃಢಗೊಳಿಸಲು ಹೆಚ್ಚಿನ ಪ್ರಯತ್ನಗಳು ನಡೆಯಬೇಕು ಎನ್ನುವುದನ್ನು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ ಎಂದ ಅವರು, ಎರಡು ಬೃಹತ್ ಶಕ್ತಿಗಳ ನಡುವೆ ಭಿನ್ನಾಭಿಪ್ರಾಯದ ಕ್ಷೇತ್ರಗಳು ಇರುವುದು ಸಹಜವಾಗಿದೆ ಮತ್ತು ಅದನ್ನು ಪರಸ್ಪರ ಗೌರವದೊಂದಿಗೆ ನಿರ್ವಹಿಸಬೇಕಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News