ಅಮೆರಿಕಕ್ಕೆ ಮತ್ತೆ ಚಂಡಮಾರುತ ಭೀತಿ

Update: 2017-09-05 16:31 GMT

ವಾಶಿಂಗ್ಟನ್, ಸೆ. 5: ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ‘ಹಾರ್ವೆ’ ಚಂಡಮಾರುತ ರುದ್ರನರ್ತನಗೈದ ಬೆನ್ನಿಗೇ, ಇನ್ನೊಂದು ಚಂಡಮಾರುತ ‘ಇರ್ಮಾ’ ಕೆರಿಬಿಯನ್ ದ್ವೀಪಗಳು ಮತ್ತು ಅಮೆರಿಕದ ಫ್ಲೋರಿಡ ರಾಜ್ಯದತ್ತ ಧಾವಿಸಿ ಬರುತ್ತಿದೆ.

ಅಮೆರಿಕದ ಪೋರ್ಟರಿಕೊ, ಯುಎಸ್ ವರ್ಜಿನ್ ಐಲ್ಯಾಂಡ್ಸ್ ಮತ್ತು ಫ್ಲೋರಿಡ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.

‘ಕೆಟಗರಿ 4’ ಬಿರುಗಾಳಿಯಾಗಿ ಧಾವಿಸುತ್ತಿರುವ ಅದು ಮತ್ತಷ್ಟು ಪ್ರಬಲಗೊಂಡು ಮಂಗಳವಾರ ರಾತ್ರಿ ತೀರಕ್ಕೆ ಅಪ್ಪಳಿಸುವ ನಿರೀಕ್ಷೆಯಿದೆ.

ಆಂಟಿಗ, ಬಾರ್ಬುಡ, ಆಂಗ್ವಿಲ, ಮಾಂಟ್‌ಸೆರಟ್, ಸೇಂಟ್ ಕಿಟ್ಸ್ ಮತ್ತು ನೆವಿಸ್, ಸಬಾ, ಸೇಂಟ್ ಯೂಸ್ಟೇಶಸ್, ಸೇಂಟ್ ಮಾರ್ಟೇನ್, ಸೇಂಟ್ ಮಾರ್ಟಿನ್, ಸೇಂಟ್ ಬಾರ್ದಲೆಮಿ, ಬ್ರಿಟಿಶ್ ವರ್ಜಿನ್ ಐಲ್ಯಾಂಡ್ಸ್, ಪೋರ್ಟರಿಕೊ, ವಿಯಕಸ್ ಮತ್ತು ಕಲೆಬ್ರಗಳಲ್ಲಿ ಚಂಡಮಾರುತ ಎಚ್ಚರಿಕೆಯನ್ನು ಹೊರಡಿಸಲಾಗಿದೆ.

ಚಂಡಮಾರುತದ ಪರಿಣಾಮವಾಗಿ ಲೀವಾರ್ಡ್ ಐಲ್ಯಾಂಡ್ಸ್, ಬ್ರಿಟಿಶ್ ಮತ್ತು ಯುಎಸ್ ವರ್ಜಿನ್ ಐಲ್ಯಾಂಡ್ಸ್‌ಗಳು ಮತ್ತು ಪೋರ್ಟರಿಕೊಗಳಲ್ಲಿ 4ರಿಂದ 8 ಇಂಚು ಹಾಗೂ 12 ಇಂಚುವರೆಗೂ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಮುನ್ನೆಚ್ಚರಿಕೆ ತಿಳಿಸಿದೆ.

ಭಾರೀ ಮಳೆಯಿಂದಾಗಿ ದಿಢೀರ್ ಪ್ರವಾಹ ಮತ್ತು ಭೂಕುಸಿತಗಳು ಉಂಟಾಗುವ ಸಾಧ್ಯತೆಯಿದೆ.

ಈ ವಲಯದ ಶಾಲೆಗಳನ್ನು ಮುಚ್ಚಲಾಗಿದೆ ಹಾಗೂ ವಿಮಾನಗಳನ್ನು ರದ್ದುಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News