1.25 ಲಕ್ಷ ರೊಹಿಂಗ್ಯರು ಬಾಂಗ್ಲಾದೇಶಕ್ಕೆ ಪಲಾಯನ

Update: 2017-09-05 17:52 GMT

ಕಾಕ್ಸ್ ಬಝಾರ್ (ಬಾಂಗ್ಲಾದೇಶ), ಸೆ. 5: ಮ್ಯಾನ್ಮಾರ್‌ನಲ್ಲಿ ಸೇನೆ ನಡೆಸುತ್ತಿರುವ ದಮನ ಕಾರ್ಯಾಚರಣೆಗೆ ಬೆದರಿ ಸುಮಾರು 1.25 ಲಕ್ಷ ಅಲ್ಪಸಂಖ್ಯಾತ ರೊಹಿಂಗ್ಯ ಮುಸ್ಲಿಮರು ಈಗಾಗಲೇ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಗಂಭೀರ ಪರಿಸ್ಥಿತಿ ನೆಲೆಸಿರುವಂತೆಯೇ, ಹಿಂಸಾಚಾರವನ್ನು ನಿಲ್ಲಿಸುವಂತೆ ಮುಸ್ಲಿಮ್ ಬಾಹುಳ್ಯದ ದೇಶಗಳಾದ ಬಾಂಗ್ಲಾದೇಶ, ಇಂಡೋನೇಶ್ಯ ಮತ್ತು ಪಾಕಿಸ್ತಾನಗಳು ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂ ಕಿ ಮೇಲೆ ಒತ್ತಡ ಹೇರಿವೆ.

ರಕ್ತಪಾತವನ್ನು ನಿಲ್ಲಿಸುವಂತೆ ಮ್ಯಾನ್ಮಾರನ್ನು ಒತ್ತಾಯಿಸಲು ಇಂಡೋನೇಶ್ಯದ ವಿದೇಶ ಸಚಿವೆ ರೆಟ್ನೊ ಮರ್ಸೂಡಿ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆಯೂ ಆಗಿರುವ ಸೂ ಕಿ ಮತ್ತು ಮ್ಯಾನ್ಮಾರ್ ಸೇನಾ ಮುಖ್ಯಸ್ಥ ಮಿನ್ ಆಂಗ್ ಹಲಯಾಂಗ್‌ರನ್ನು ಸೋಮವಾರ ಭೇಟಿಯಾದರು.

 ‘‘ಅಲ್ಲಿ ನಡೆಯುತ್ತಿರುವ ಎಲ್ಲ ರೀತಿಯ ಹಿಂಸಾಚಾರವನ್ನು ಸೇನಾ ಪಡೆಗಳು ತಕ್ಷಣ ನಿಲ್ಲಿಸಬೇಕು ಹಾಗೂ ತಕ್ಷಣದ ಮತ್ತು ದೀರ್ಘಾವಧಿಗಾಗಿ ಮಾನವೀಯ ನೆರವು ಮತ್ತು ಅಭಿವೃದ್ಧಿ ನಿಧಿಯನ್ನು ಒದಗಿಸಬೇಕು’’ ಎಂದು ಮ್ಯಾನ್ಮಾರ್ ರಾಜಧಾನಿ ಯಾಂಗನ್‌ನಲ್ಲಿ ಸಭೆಗಳನ್ನು ನಡೆಸಿದ ಬಳಿಕ ರೆಟ್ನೊ ಹೇಳಿದರು.

ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಆಗಸ್ಟ್ 25ರಂದು ರೊಹಿಂಗ್ಯ ಬಂಡುಕೋರರು ಪೊಲೀಸ್ ಠಾಣೆಗಳ ಮೇಲೆ ಸಂಘಟಿತ ದಾಳಿ ನಡೆಸಿದ ಬಳಿಕ ಹೊಸದಾಗಿ ಹಿಂಸಾಚಾರ ಆರಂಭವಾಗಿದೆ ಎಂದು ಹೇಳಲಾಗಿದೆ.

ಬಳಿಕ ಸೇನೆ ನಡೆಸಿದ ದಮನ ಕಾರ್ಯಾಚರಣೆಯಲ್ಲಿ ಕನಿಷ್ಠ 400 ಮಂದಿ ಮೃತಪಟ್ಟಿದ್ದಾರೆ ಹಾಗೂ ಭಾರಿ ಸಂಖ್ಯೆಯ ರೊಹಿಂಗ್ಯರು ಬಾಂಗ್ಲಾದೇಶಕ್ಕೆ ಸಾಮೂಹಿಕ ಪಲಾಯನಗೈದಿದ್ದಾರೆ.

ರೊಹಿಂಗ್ಯ ಬಂಡುಕೋರರು ಸಾವಿರಾರು ಮನೆಗಳನ್ನು ಸುಟ್ಟುಹಾಕಿದ್ದಾರೆ ಎಂದು ಮ್ಯಾನ್ಮಾರ್ ಸರಕಾರ ಹೇಳಿದೆ. ಆದರೆ, ರೊಹಿಂಗ್ಯರನ್ನು ಹೊರದಬ್ಬುವುದಕ್ಕಾಗಿ ಅವರ ಮನೆಗಳಿಗೆ ಸೇನೆಯೇ ಬೆಂಕಿ ಕೊಡುತ್ತಿದೆ ಎಂದು ಮಾನವಹಕ್ಕುಗಳ ಸಂಘಟನೆಗಳು ಮತ್ತು ಬಾಂಗ್ಲಾದೇಶಕ್ಕೆ ಪರಾರಿಯಾಗಿ ಬಂದಿರುವ ರೊಹಿಂಗ್ಯರು ಆರೋಪಿಸಿದ್ದಾರೆ.

ಇಸ್ಲಾಮಿಕ್ ಸಹಕಾರ ಸಂಘಟನೆ ಖಂಡನೆ

ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ರೊಹಿಂಗ್ಯ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ಹಿಂಸಾಚಾರವನ್ನು ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ)ಯ ಸ್ವತಂತ್ರ ಮಾನವಹಕ್ಕುಗಳ ಆಯೋಗ (ಐಪಿಎಚ್‌ಆರ್‌ಸಿ) ಪ್ರಬಲವಾಗಿ ಖಂಡಿಸಿದೆ.

ರೊಹಿಂಗ್ಯ ಅಲ್ಪಸಂಖ್ಯಾತರ ಮಾನವಹಕ್ಕುಗಳನ್ನು ರಕ್ಷಿಸುವಂತೆ ಮ್ಯಾನ್ಮಾರನ್ನು ಒತ್ತಾಯಿಸುವಂತೆ ಐಪಿಎಚ್‌ಆರ್‌ಸಿ ಎಲ್ಲ ಒಐಸಿ ಸದಸ್ಯ ದೇಶಗಳಿಗೆ, ಅದರಲ್ಲೂ ಮುಖ್ಯವಾಗಿ ನೆರೆಯ ದೇಶಗಳಿಗೆ ಕರೆ ನೀಡಿದೆ ಹಾಗೂ ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಮಿತಿ ಮತ್ತು ಭದ್ರತಾ ಮಂಡಳಿ ಮುಂತಾದ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವಂತೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News