ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಿಬಿಐ ತನಿಖೆಯಾಗಲಿ: ಜನಾರ್ದನ ಪೂಜಾರಿ

Update: 2017-09-06 07:47 GMT

ಮಂಗಳೂರು, ಸೆ.6: ಹಿರಿಯ ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಹತ್ಯೆ ಪೂರ್ವ ನಿಯೋಜಿತವಾಗಿದ್ದು, ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಒತ್ತಾಯಿಸಿದ್ದಾರೆ. 

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಇದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಶನಿ ಹಿಡಿದಿದೆ. ಕಲಬುರ್ಗಿಯವರ ಹತ್ಯೆ ನಡೆದು ಇನ್ನೂ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದಿರುವ ನಡುವೆಯೇ ಗೌರಿ ಲಂಕೇಶ್ ಅವರ ಹತ್ಯೆ ನಡೆದಿರುವ ಸಂದರ್ಭ ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆ ಏನು ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ರಾಜ್ಯ ಸರಕಾರವನ್ನು ತರಾಟೆಗೈದರು. ಪ್ರಕರಣದ ಕುರಿತು ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವ ಕೆಲಸ ಆಗಬೇಕು. ಆಗ ಮಾತ್ರ ಕೊಲೆಯಾದ ಗೌರಿಯವರ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ ಎಂದು ಅವರು ಹೇಳಿದರು.

ರಾಜ್ಯದ ಓರ್ವ ಸಚಿವರಾಗಿರುವ ರಮಾನಾಥ ರೈಯವರಿಗೆ ಜವಾಬ್ದಾರಿ ಇದೆ ಎಂಬುದನ್ನು ಅವರು ಈವರೆಗೆ ತೋರಿಸಿಕೊಟ್ಟಿಲ್ಲ. ಜಿಲ್ಲೆ ಮಾತ್ರವಲ್ಲ, ರಾಜ್ಯದಲ್ಲಿ ಪ್ರತಿಭಟನೆ ಆಗುತ್ತಿರುವಾಗ ಈಗಾಗಲೇ ಜಿಲ್ಲೆಯಲ್ಲಿ ಆಗಿರುವ ಘಟನೆಗಳಿಗೆ ಸಂಬಂಧಿಸಿ ಕ್ಷಮೆ ಯಾಚಿಸಬೇಕಿತ್ತು. ಅದನ್ನು ಬಿಟ್ಟು ಉದ್ಧಟತನ ತೋರಿಸಿದರೆ ಯಾರೂ ಕೂಡಾ ಕ್ಷಮಿಸಲಾರರು. ತಪ್ಪು ಆದಾಗ ಅದನ್ನು ಒಪ್ಪಿಕೊಂಡು ಕ್ಷಮೆ ಕೋರುವ ಕೆಲಸ ದೊಡ್ಡತನ ಎಂದು ರಮಾನಾಥ ರೈ ವಿರುದ್ಧ ಪೂಜಾರಿ ವಾಗ್ದಾಳಿ ನಡೆಸಿದರು.

ಬಿಜೆಪಿ ನಾಯಕರನ್ನೂ ತರಾಟೆಗೈದ ಜನಾರ್ದನ ಪೂಜಾರಿ, ನಗರದಲ್ಲಿ ಕೋಮು ಜ್ವಾಲೆ ಉರಿಯುತ್ತಿರುವಾಗ ಕಾನೂನು ಕೈಗೆತ್ತಿಕೊಲ್ಳುತ್ತಿರುವುದು ಸರಿಯಲ್ಲ. ಸಮಾಜದ ಸ್ವಾಸ್ಥವನ್ನು ಹಾಳುಗೆಡಹುವ ಕೆಲಸವನ್ನು ಮಾಡುತ್ತಿರುವುದನ್ನು ಯಾವ ಸರಕಾರ ಸಹಿಸುವುದಿಲ್ಲ ಎಂದು ಅವರು ಹೇಳಿದರು.

ಸಾಮರಸ್ಯದ ನಡಿಗೆ ಯಾರೂ ಮಾಡಿದರೂ ನನ್ನ ವಿರೋಧವಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಜನಾರ್ದನ ಪೂಜಾರಿ, ಆರೋಗ್ಯ ಸರಿ ಇದ್ದರೆ ನಾನೂ ಭಾಗವಹಿಸುತ್ತೇನೆ ಎಂದರು. ಸಚಿವ ಖಾದರ್‌ರವರು ಮಂಗಳೂರು ಚಲೋ ವಿರುದ್ಧ ಹೇಳಿಕೆ ನೀಡುವಾಗ ತನ್ನ ಹೆಸರನ್ನು ಪ್ರಸ್ತಾಪಿಸಿದ್ದಾರೆಂದು ಆಕ್ಷೇಪಿಸಿದ ಜನಾರ್ದನ ಪೂಜಾರಿ, ನನ್ನ ಹೆಸರು ಹೇಳದೆ ಅವರಿಗೆ ಹೇಳಿಕೆ ನೀಡಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಮಾಜಿ ಮೇಯರ್ ಅಜಿತ್ ಕುಮಾರ್, ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News