ಉಡುಪಿ: ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪತ್ರಕರ್ತರಿಂದ ಧರಣಿ

Update: 2017-09-06 09:18 GMT

ಉಡುಪಿ, ಸೆ.6: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಕಾರ್ಯಕರ್ತರ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಜಿಲ್ಲೆಯ ಪತ್ರಕರ್ತರು ಬುಧವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಧರಣಿ ನಡೆಸಿದರು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಜಯಕರ ಸುವರ್ಣ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ತೀವ್ರ ಖಂಡನೀಯ. ಇಂದು ಪತ್ರಕರ್ತರು ನಿಭೀರ್ತಿಯಿಂದ ಕಾರ್ಯನಿರ್ವಹಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಸರಕಾರ ಪತ್ರಕರ್ತರಿಗೆ ರಕ್ಷಣೆ ಒದಗಿಸಬೇಕು ಮತ್ತು ಹತ್ಯೆ ಪ್ರಕರಣದ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಸಲಾಗುವುದು ಎಂದರು.

ಸಂಘದ ಮಾಜಿ ಅಧ್ಯಕ್ಷ ಕಿರಣ್ ಮಂಜನಬೈಲು ಮಾತನಾಡಿ, ವೈಚಾರಿಕ ಭಿನ್ನಾಭಿಪ್ರಾಯಗಳಿಗೆ ಗುಂಡು ಉತ್ತರವಾಗುವುದಿಲ್ಲ. ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರವನ್ನು ಯಾವುದೇ ಹತ್ಯೆಯ ಮೂಲಕ ಹತ್ತಿಕಲ್ಲು ಸಾಧ್ಯವಿಲ್ಲ. ಕೊಲೆಗಡುಕರನ್ನು ಶೀಘ್ರವೇ ಬಂಧಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಪತ್ರಕರ್ತ ದೀಪಕ್ ಜೈನ್ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಪ್ರಸಾದ್ ಪಾಂಡೇಲು, ಕೋಶಾಧಿಕಾರಿ ರಾಜೇಶ್ ಶೆಟ್ಟಿ ಅಲೆವೂರು, ಪದಾಧಿಕಾರಿಗಳಾದ ನಝೀರ್ ಪೊಲ್ಯ, ಸಂತೋಷ್ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News