13 ವರ್ಷದ ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತಕ್ಕೆ ಅನುಮತಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಸೆ.6: ಮೂವತ್ತೊಂದು ವಾರಗಳ ಗರ್ಭವತಿಯಾಗಿದ್ದ 13 ವರ್ಷದ ಬಾಲಕಿಯೊಬ್ಬಳ ಗರ್ಭಪಾತಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಅನುಮತಿ ನೀಡಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ, ಜಸ್ಟಿಸ್ ಎ.ಎಂ. ಖನ್ವಿಲ್ಕರ್ ಹಾಗೂ ಜಸ್ಟಿಸ್ ಅಮಿತಾವ ರಾಯ್ ಅವರನ್ನೊಳಗೊಂಡ ಪೀಠ ಈ ಬಗೆಗಿನ ಆದೇಶವನ್ನು ನೀಡಿದೆ.
ಸಂತ್ರಸ್ತೆಯ ವಯಸ್ಸು ಹಾಗೂ ಆಕೆ ಈ ವಯಸ್ಸಿನಲ್ಲಿ ಎದುರಿಸುತ್ತಿರುವ ಸಮಸ್ಯೆಯನ್ನು ಪರಿಗಣಿಸಿ ಆಕೆಯ ಗರ್ಭಪಾತಕ್ಕೆ ಅನುಮತಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ಸಾಧ್ಯವಾದಲ್ಲಿ ಸೆಪ್ಟೆಂಬರ್ 8ರಂದೇ ಬಾಲಕಿಗೆ ಗರ್ಭಪಾತ ನಡೆಸುವಂತೆ ನ್ಯಾಯಾಲಯ ಆದೇಶ ನೀಡಿದೆ.
ಈ ಹಿಂದಿನ ವಿಚಾರಣೆ ಸಂದರ್ಭ ಸುಪ್ರೀಂ ಕೋರ್ಟ್ ಚಂಡೀಗಢ ಆಡಳಿತಕ್ಕೆ ನೀಡಿದ ಆದೇಶದಲ್ಲಿ ಸಂತ್ರಸ್ತೆ ಮತ್ತಾಕೆಯ ತಾಯಿಗೆ ತಕ್ಷಣದ ಆರ್ಥಿಕ ಪರಿಹಾರವಾಗಿ ತಲಾ ರೂ. ಒಂದು ಲಕ್ಷ ನೀಡುವಂತೆ ಹೇಳಲಾಗಿತ್ತು. ತನ್ನ ಮಗಳ ಗರ್ಭವನ್ನು ತೆಗೆಸಲು ಅನುಮತಿ ಕೋರಿ ಬಾಲಕಿಯ ತಾಯಿಯು ಸುಪ್ರೀಂ ಕೋರ್ಟಿನ ಕದ ತಟ್ಟಿದ್ದಳು.
ಈ ಹಿಂದೆ ಇಂತಹುದೇ ಇನ್ನೊಂದು ಪ್ರಕರಣದಲ್ಲಿ ಜುಲೈ 28ರಂದು ಸುಪ್ರೀಂ ಕೋರ್ಟ್ ವೈದ್ಯಕೀಯ ಕಾರಣಗಳಿಗಾಗಿ ಇನ್ನೊಬ್ಬ 10 ವರ್ಷದ ರೇಪ್ ಸಂತ್ರಸ್ತೆಯ ಅಪೀಲನ್ನು ತಿರಸ್ಕರಿಸಿತ್ತು. ಆಕೆ 32 ವಾರಗಳ ಗರ್ಭವತಿಯಾಗಿದ್ದಳು. ಈ ಬಾಲಕಿ ಇತ್ತೀಚೆಗಷ್ಟೇ ಚಂಡೀಗಢದ ಆಸ್ಪತ್ರೆಯೊಂದರಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ.