×
Ad

ಗಣೇಶ ವಿಗ್ರಹ ವಿಸರ್ಜನೆ : ಮಹಾರಾಷ್ಟ್ರದಲ್ಲಿ 15 ಮಂದಿ ಸಾವು

Update: 2017-09-06 22:40 IST

ಮಹಾರಾಷ್ಟ್ರ, ಸೆ. 6: ಮಹಾರಾಷ್ಟ್ರದಲ್ಲಿ ಗಣೇಶನ ವಿಗ್ರಹದ ವಿಸರ್ಜನೆ ಸಂದರ್ಭ ಒಟ್ಟು 15 ಜನರು ಮೃತಪಟ್ಟಿದ್ದಾರೆ.

 ರಾಜ್ಯದಲ್ಲಿ ನಿನ್ನೆ ರಾತ್ರಿ ವರೆಗೆ 11 ಜನರು ಮೃತಪಟ್ಟಿದ್ದಾರೆ. ಬುಧವಾರ ಈ ಸಂಖ್ಯೆ 15ಕ್ಕೆ ಏರಿದೆ ಎಂದು ರಾಜ್ಯ ಪೊಲೀಸ್ ಕೇಂದ್ರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ಔರಂಗಾಬಾದ್ ಜಿಲ್ಲೆಯ ಬಿಡ್ಕಿನಂ ಸಮೀಪದ ಶಿವಾನಿ ಕೆರೆಯಲ್ಲಿ ಮಂಗಳವಾರ ಗಣೇಶ ವಿಗ್ರಹ ವಿಸರ್ಜನೆ ವೇಳೆ ಮೂವರು ಮುಳುಗಿ ಮೃತಪಟ್ಟಿದ್ದಾರೆ. ಪುಣೆಯಲ್ಲಿ ನಾಲ್ವರು ಹಾಗೂ ಜಲ್ಗಾವ್‌ನಲ್ಲಿ ಒಬ್ಬರು ಹಾಗೂ ನಾಸಿಕ್, ಬೀಡ್ ಜಿಲ್ಲೆಯಲ್ಲಿ ತಲಾ ಒಬ್ಬರು ಮುಳುಗಿ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ನಾಸಿಕ್, ಅಹ್ಮದ್‌ನಗರ್, ಸತಾರಾ ಹಾಗೂ ಪರ್ಭಾನಿಯಲ್ಲಿ ಬುಧವಾರ ತಲಾ ಒಬ್ಬರು ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ಇದುವರೆಗೆ ಖಚಿತ ವಿವರಗಳು ದೊರಕಿಲ್ಲ.

 ಜನಪ್ರಿಯ ಲಾಲ್‌ಬಾಗ್‌ಚಾ ರಾಜಾ ವಿಗ್ರಹವನ್ನು 22 ಗಂಟೆಗಳ ಕಾಲ ಮೆರವಣಿಗೆ ನಡೆಸಿ ದಕ್ಷಿಣ ಮುಂಬೈಯ ಗಿರ್ಗಾಂವ್ ಚೌಪಾಟಿಯ ಸಮುದ್ರದಲ್ಲಿ ಬುಧವಾರ ಬೆಳಗ್ಗೆ ವಿಸರ್ಜಿಸಲಾಯಿತು. ದಗ್ಡುಸೇತ್ ಹಲ್ವಾಯಿ ಗಣೇಶ ವಿಗ್ರಹವನ್ನು 20 ಗಂಟೆ ಮೆರವಣಿಗೆ ನಡೆಸಿದ ಬಳಿಕ ವಿಸರ್ಜಿಸಲಾಯಿತು.

  ಸಹಜ ಹಾಗೂ ಕೃತಕ ಕೊಳ, ಸಮುದ್ರ ತೀರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಇಂದು 7 ಗಂಟೆ ವರೆಗೆ 7 ಸಾವಿರ ಸಾರ್ವಜನಿಕ ಗಣೇಶನ ವಿಗ್ರಹ ಹಾಗೂ ಮನೆಯಲ್ಲಿ ಪೂಜಿಸಿದ 33 ಸಾವಿರ ವಿಗ್ರಹಗಳನ್ನು ವಿಸರ್ಜಿಸಲಾಯಿತು ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

 ನೈಸರ್ಗಿಕ ನೀರಿನ ತಾಣಗಳ ಮಾಲಿನ್ಯ ತಡೆಯಲು ಬಿಎಂಸಿ ನಿರ್ಮಿಸಿದ ಕೃತಕ ಕೊಳಗಳಲ್ಲಿ ಹೆಚ್ಚಿನ ವಿಗ್ರಹಗಳನ್ನು ವಿಸರ್ಜಿಸಲಾಯಿತು. ಮುಂಬೈಯಲ್ಲಿ ಗಣೇಶನ ವಿಗ್ರಹವನ್ನು ವಿಸರ್ಜಿಸಿದ ಪ್ರಮುಖ ಸ್ಥಳಗಳೆಂದರೆ ಗಿರ್ಗಾಂವ್ ಚೌಪಾಟಿ, ಜುಹು ಬೀಚ್, ಪೊವಾಯಿ ಲೇಕ್, ದಾದರ್ ಚೌಪಾತಿ, ಮಧ್ ಜೆಟ್ಟಿ ಹಾಗೂ ಮಾರ್ವೆ. ಕಣ್ಗಾವಲಿಗಾಗಿ ಆಡಳಿತ ಹೆಲಿಕಾಪ್ಟರ್ ಹಾಗೂ ಡ್ರೋನ್‌ಗಳನ್ನು ನಿಯೋಜಿಸಿಲಾಗಿತ್ತು. ವಿವಿಧ ನೀರಿನಾಶ್ರಯಗಳ ಸಮೀಪ ಜೀವರಕ್ಷಕರನ್ನು ನಿಯೋಜಿಸಲಾಗಿತ್ತು. ನಿಯಂತ್ರಣ ಘಟಕ ಹಾಗೂ ಪ್ರಥಮ ಚಿಕಿತ್ಸೆ ಕೇಂದ್ರಗಳನ್ನು ನಗರದಾದ್ಯಂತ ಸ್ಥಾಪಿಸಲಾಗಿತ್ತು. ಯಾವುದೇ ಸನ್ನಿವೇಶ ಬಂದರೂ ಎದುರಿಸಲು ಮೋಟಾರ್ ಬೋಟ್ ಹಾಗೂ ಆ್ಯಂಬುಲೆನ್ಸ್‌ಗಳನ್ನು ಸಿದ್ಧವಾಗಿ ಇರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News