ಕಾಗೆಯನ್ನು ರಕ್ಷಿಸಲು ಈತ ಮೊಬೈಲ್ ಟವರನ್ನೇರಿದ!

Update: 2017-09-07 12:00 GMT

ಹೈದರಾಬಾದ್,ಸೆ.7: ನೆಲದಿಂದ 70 ಅಡಿ ಎತ್ತರದಲ್ಲಿ ತನ್ನ ಪ್ರಾಣವನ್ನುಳಿಸಿಕೊಳ್ಳಲು ಒದ್ದಾಡುತ್ತಿದ್ದ ಕಾಗೆಯೊಂದನ್ನು ರಕ್ಷಿಸುವ ಮೂಲಕ ಇಲ್ಲಿಯ ಹೋಮ್‌ಗಾರ್ಡ್ ಓರ್ವ ಮಾನವೀಯತೆಯನ್ನು ಮೆರೆದಿದ್ದಾನೆ. ಕಾಗೆಯು 150 ಅಡಿ ಎತ್ತರದ ಮೊಬೈಲ್ ಗೋಪುರದಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಅದನ್ನು ಬಿಡಿಸಲು ಹೋಮ್‌ಗಾರ್ಡ್ ಕೃಷ್ಣ ಬರೋಬ್ಬರಿ 45 ನಿಮಿಷಗಳ ಕಾಲ ಶ್ರಮಿಸಿದ್ದರು.

ಹೈದರಾಬಾದ್‌ನ ಮದನಪೇಟ್ ಪ್ರದೇಶದಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದೆ.

ಹೈದರಾಬಾದ್‌ನ ಪೊಲೀಸ್ ನಿಯಂತ್ರಣ ಕೊಠಡಿಗೆ ವಿಲಕ್ಷಣ ಕರೆಯೊಂದು ಬಂದಿದ್ದು, ಅದನ್ನು ಮಾಡಿದ್ದ ವ್ಯಕ್ತಿ ಮೊಬೈಲ್ ಗೋಪುರದಲ್ಲಿ ಕಾಗೆಯೊಂದು ಸಿಕ್ಕಿಹಾಕಿಕೊಂಡಿದೆ ಮತ್ತು ಜೀವ ಉಳಿಸಿಕೊಳ್ಳಲು ಒದ್ದಾಡುತ್ತಿದೆ ಎಂಬ ಮಾಹಿತಿ ನೀಡಿದ್ದ. ನಿಯಂತ್ರಣ ಕೊಠಡಿಗೆ ಬರುವ ಯಾವುದೇ ಕರೆಯು ಸ್ವಯಂಚಾಲಿತವಾಗಿ ಸಂಬಂಧಿಸಿದ ಪೊಲೀಸ್ ಠಾಣೆಗೆ ರವಾನೆಯಾಗುತ್ತದೆ ಮತ್ತು ಅಲ್ಲಿಯ ಅಧಿಕಾರಿಗಳು ಐದು ನಿಮಿಷಗಳಲ್ಲಿ ಸ್ಪಂದಿಸಬೇಕಾಗುತ್ತದೆ. ಹೀಗೆ ಈ ಕರೆ ಮದನಪೇಟ್ ಠಾಣೆಗೆ ರವಾನೆಯಾಗಿತ್ತು.

 ಮಾಹಿತಿಯನ್ನು ಪಡೆದ ಮದನಪೇಟ್ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದರು. ಕೃಷ್ಣ ಗಸ್ತುವಾಹನದ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಾಗೆಯ ರಕ್ಷಣೆ ತನ್ನ ಕೆಲಸವಲ್ಲದಿದ್ದರೂ ಅವರು ಯಾರಿಗೂ ಕಾಯದೆ ತಕ್ಷಣ ಕಾರ್ಯಾಚರಣೆಗೆ ಧುಮುಕಿದ್ದರು. ಗೋಪುರದ ಅಡ್ಡಪಟ್ಟಿಗಳ ನೆರವಿನಿಂದ ಅದನ್ನು ಹತ್ತಿ ಕಾಗೆ ಸಿಲುಕಿಕೊಂಡಿದ್ದ ಜಾಗವನ್ನು ತಲುಪಿದ್ದರು. ಆಪತ್ತಿನಲ್ಲಿದ್ದ ಕಾಗೆಯ ಸುತ್ತಲೂ ಇತರ ಕಾಗೆಗಳು ಹತಾಶ ಹಾರಾಟವನ್ನು ನಡೆಸಿದ್ದವು. ಕಾಗೆಯನ್ನು ಬಿಡಿಸಿದ ಕೃಷ್ಣ ಅದನ್ನು ಹಾರಿಬಿಟ್ಟಾಗ ಮರುಜನ್ಮ ಪಡೆದಿದ್ದ ಅದು ತನಗಾಗಿ ಕಾಯುತ್ತಿದ್ದ ಇತರ ಕಾಗೆಗಳ ಗುಂಪನ್ನು ಸೇರಿಕೊಂಡಿತ್ತು.

ಕಾಗೆ ಸಂಕಷ್ಟದಿಂದ ಪಾರಾಗಿದ್ದು ಹಾಗೂ ಮತ್ತೆ ಸ್ವಚ್ಛಂದವಾಗಿ ಹಾರಿದ್ದು ತನಗೆ ತುಂಬ ತೃಪ್ತಿಯನ್ನು ನೀಡಿದೆ. ಇದು ಗೋಪುರದ ಕೆಳಗಿದ್ದ ಜನರು ಮತ್ತು ಅಧಿಕಾರಿಗಳ ಹೊಗಳಿಕೆಗಿಂತ ಹೆಚ್ಚಿನ ಸಂತಸವನ್ನುಂಟು ಮಾಡಿದೆ ಎಂದು ಕೃಷ್ಣ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News