×
Ad

ಪಿಎಂಜಿಕೆವೈ ಯೋಜನೆಯಡಿ 4,900 ಕೋಟಿ ರೂ. ಮೊತ್ತದ ಕಾಳಧನ ಬಹಿರಂಗ

Update: 2017-09-07 21:06 IST

ಹೊಸದಿಲ್ಲಿ, ಸೆ.7: ಕಪ್ಪುಹಣ ಬಹಿರಂಗಗೊಳಿಸಲು ಅಂತಿಮ ಅವಕಾಶ ಎಂದು ಹೇಳಲಾದ ‘ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ’(ಪಿಎಂಜಿಕೆವೈ)ಯಡಿ 21,000 ಮಂದಿ ಒಟ್ಟು 4,900 ಕೋಟಿ ರೂ. ಮೊತ್ತವನ್ನು ಬಹಿರಂಗಗೊಳಿಸಿದ್ದಾರೆ ಎಂದು ಸರಕಾರ ತಿಳಿಸಿದೆ.

ಈ ಮೊತ್ತದ ಮೇಲಿನ ತೆರಿಗೆಯಿಂದ 2,451 ಕೋಟಿ ರೂ. ಸಂಗ್ರಹಿಸಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಜಾರಿಗೆ ಬಂದ ಪಿಎಂಜಿಕೆವೈ ಯೋಜನೆ ಈ ವರ್ಷದ ಮಾರ್ಚ್ 31ಕ್ಕೆ ಅಂತ್ಯವಾಗಿತ್ತು. ಯೋಜನೆಗೆ ವ್ಯಕ್ತವಾಗಿರುವ ಪ್ರತಿಕ್ರಿಯೆ ‘ಅಷ್ಟೇನೂ ಉತ್ತಮವಾಗಿಲ್ಲ’ ಎಂದು ಆದಾಯ ಇಲಾಖೆಯ ಕಾರ್ಯದರ್ಶಿ ಹಸ್‌ಮುಖ್ ಅಧಿಯ ತಿಳಿಸಿದ್ದಾರೆ.

 ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಕಪ್ಪುಹಣ ಬಹಿರಂಗಕ್ಕೆ ಈ ಆರ್ಥಿಕ ವರ್ಷದಲ್ಲಿ ಜಾರಿಗೊಳಿಸಿದ ಹಲವು ಯೋಜನೆಗಳಲ್ಲಿ ಪಿಎಂಜಿಕೆವೈ ಯೋಜನೆ ಕೂಡಾ ಸೇರಿದೆ. ಅದನ್ನು ಪ್ರತ್ಯೇಕವಾಗಿ ಪರಿಗಣಿಸುವಂತಿಲ್ಲ. ಇದಕ್ಕೂ ಮುನ್ನ, 2016ರ ಜೂನ್ 1ರಿಂದ 2016ರ ಸೆಪ್ಟೆಂಬರ್ 30ರವರೆಗಿನ ಅವಧಿಯಲ್ಲಿ ‘ಆದಾಯ ಘೋಷಣೆ ಯೋಜನೆ’ (ಐಡಿಎಸ್) ಜಾರಿಮಾಡಲಾಗಿತ್ತು. ಇದರಡಿ 71,726 ಮಂದಿ 67,382 ಕೋಟಿ ರೂ. ಆದಾಯವನ್ನು ಬಹಿರಂಗಗೊಳಿಸಿದ್ದರು. ಈ ಯೋಜನೆಯಡಿ 12,700 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.

 ಕಪ್ಪುಹಣ ಬಹಿರಂಗಗೊಳಿಸಲು ಪಿಎಂಜಿಕೆವೈ ಅಂತಿಮ ಅವಕಾಶ ಎಂದು ಸರಕಾರ ಘೋಷಿಸಿತ್ತು. ಈ ಯೋಜನೆಯಡಿ ಘೋಷಿಸಲಾದ ಮೊತ್ತಕ್ಕೆ ಶೇ.49.9ರಷ್ಟು ತೆರಿಗೆ, ಸರ್ಚಾರ್ಜ್ ಮತ್ತು ದಂಡ ವಿಧಿಸಲಾಗುತ್ತದೆ. ಅಲ್ಲದೆ ಘೋಷಿತ ಹಣದ ಶೇ.25ರಷ್ಟು ಮೊತ್ತವನ್ನು ನಾಲ್ಕು ವರ್ಷಾವಧಿಯಲ್ಲಿ ಶೂನ್ಯ ಬಡ್ಡಿದರದ ನಿರಖು ಠೇವಣಿಯನ್ನಾಗಿ (ಫಿಕ್ಸೆಡ್ ಡೆಪಾಸಿಟ್) ಇರಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News