ಎನ್‌ಐಎಯಿಂದ ಜಮ್ಮು-ಕಾಶ್ಮೀರದ 10 ಕಡೆಗಳಲ್ಲಿ ದಾಳಿ
ಹೊಸದಿಲ್ಲಿ, ಸೆ. 7: ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆ ಹಾಗೂ ವಿಧ್ವಂಸಕ ಚಟುವಟಿಕೆಗೆ ಹಣಕಾಸು ಹೂಡುತ್ತಿರುವ ಕುರಿತಂತೆ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿ ಜಮ್ಮ್ಮು ಕಾಶ್ಮೀರ ಹಾಗೂ ಹೊಸದಿಲ್ಲಿಯ 10 ಪ್ರದೇಶಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗುರುವಾರ ದಾಳಿ ನಡೆಸಿತು ಹಾಗೂ ಪ್ರತ್ಯೇಕತಾವಾದಿ ಶಬೀರ್ ಶಾ ಬಳಿಯಿಂದ ಶಸ್ತ್ರಾಸ್ತಗಳನ್ನು ವಶಪಡಿಸಿಕೊಂಡಿತು.
ಕಾಶ್ಮೀರ ಕಣಿವೆ, ಜಮ್ಮು, ದಿಲ್ಲಿ ಹಾಗೂ ಗುರ್ಗಾಂವ್‌ನ 10 ಭಾಗಗಳಲ್ಲಿ ಎನ್‌ಐಎ ದಾಳಿ ನಡೆಸಿತು. ಹುರಿಯತ್ ಕಾನ್ಫರೆನ್ಸ್‌ನ ಪಾಕಿಸ್ತಾನ ಪರ ಬಣದ ನಾಯಕ ಜಿ.ಎನ್. ಸುಮ್ಜಿ ಪೂರ್ವಜರ ನಿವಾಸದ ಮೇಲೆ ಕೂಡ ಎನ್‌ಐಎ ದಾಳಿ ನಡೆಸಿತು.
ಉಗ್ರ ಚಟುವಟಿಕೆಗಳ ಕೇಂದ್ರ ಎಂದು ಪರಿಗಣಿಸಲಾಗಿರುವ ದಕ್ಷಿಣ ಕಾಶ್ಮೀರದಲ್ಲಿ ಎನ್‌ಐಎ ಇದೇ ಮೊದಲ ಬಾರಿಗೆ ದಾಳಿ ನಡೆಸುತ್ತಿದೆ.
ಸಯ್ಯದ್ ಅಲಿ ಶಾ ಗಿಲಾನಿ ನೇತೃತ್ವದ ಹುರಿಯತ್ ಬಣದ ಒಂದು ಭಾಗವೂ ಆಗಿರುವ ಪ್ರಮುಖ ಪ್ರತ್ಯೇಕತಾವಾದಿ ಶಿಯಾ ನಾಯಕ ಅಗಾ ಸಯ್ಯದ್ ಹುಸೈನ್ ನಿವಾಸದ ಮೇಲೂ ಎನ್‌ಐಎ ದಾಳಿ ನಡೆಸಿದೆ.
ಪ್ರತ್ಯೇಕವಾದಿ ಶಬೀರ್ ಶಾ ನಿಕಟ ಸಹವರ್ತಿ ಅಬ್ದುಲ್ ರಝಾಕ್‌ಗೆ ಸೇರಿದ ಒಂದು ಸ್ಥಳದ ಮೇಲೂ ದಾಳಿ ನಡೆಸಲಾಗಿದ್ದು, ಇಲ್ಲಿಂದ ಒಂದು ಪಿಸ್ತೂಲು, ಡಬಲ್ ಬ್ಯಾರಲ್ ಗನ್ ಹಾಗೂ .315 ಬೋರ್ ರೈಫಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.