ಮ್ಯಾನ್ಮಾರ್ ಹಿಂಸಾಚಾರ: 2 ವಾರಗಳಲ್ಲಿ 2 ಲಕ್ಷದ 70 ಸಾವಿರ ರೋಹಿಂಗ್ಯಾ ಮುಸ್ಲಿಮರ ಪಲಾಯನ

Update: 2017-09-08 14:49 GMT

ಹೊಸದಿಲ್ಲಿ, ಸೆ.8: ಮ್ಯಾನ್ಮಾರ್ ನಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಎರಡು ವಾರಗಳಲ್ಲಿ 2.70,000 ರೋಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಶುಕ್ರವಾರ ಹೇಳಿದೆ.

“ಸೀಮಿತ ಆಶ್ರಯ ವ್ಯವಸ್ಥೆಯು ಈಗಾಗಲೇ ಮುಗಿದಿದೆ. ಉಖಿಯಾ ಹಾಗೂ ಟೆಕ್ನಾಫ್ ನಲ್ಲಿ ತಾತ್ಕಾಲಿಕ ಟೆಂಟ್ ಗಳಲ್ಲಿ, ರಸ್ತೆ ಬದಿಗಳಲ್ಲಿ  ನಿರಾಶ್ರಿತರು ಆಶ್ರಯ ಪಡೆದಿದ್ದಾರೆ” ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

“ನಿರಾಶ್ರಿತರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿದ್ದಾರೆ. ನವಜಾತ ಶಿಶುಗಳ ತಾಯಿಯರಿದ್ದಾರೆ. ಮಕ್ಕಳಿರುವ ಕುಟುಂಬಗಳಿವೆ. ಅವರೆಲ್ಲರೂ ಅತಂತ್ರ ಸ್ಥಿತಿಯಲ್ಲಿ ಹಸಿವೆಯಿಂದಿದ್ದು, ನೆಲೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ”  ಎಂದವರು ಹೇಳಿದ್ದಾರೆ.

ಆಗಸ್ಟ್ 25ರಿಂದ ಆರಂಭವಾದ ಹಿಂಸಾಚಾರದ ನಂತರ 6,600 ರೋಹಿಂಗ್ಯಾ ಮುಸ್ಲಿಮರ ಹಾಗು 201 ಮುಸ್ಲಿಮೇತರರ ಮನೆಗಳು ಭಸ್ಮವಾಗಿದೆ ಎಂದು ವರದಿಯಾಗಿದೆ.

ಹಸಿವೆಯಿಂದ ಸಾಯುತ್ತಿದ್ದಾರೆ

ಹೆಚ್ಚಿನ ನಿರಾಶ್ರಿತರು ಬರುತ್ತಿರುವುದರಿಂದ ಪರಿಸ್ಥಿತಿ ಹದಗೆಟ್ಟಿದೆ ಎಂದು ನಿರಾಶ್ರಿತರಿಗೆ ಆಹಾರ ಮತ್ತು ನೀರು ನೀಡುತ್ತಿರುವ ಬಾಂಗ್ಲಾದೇಶದ ಉದ್ಯಮಿ ಮಝುರ್ ಮುಸ್ತಾಫ ಹೇಳುತ್ತಾರೆ.

''ಅವರಿಗೆ ನೀಡಲಾಗುತ್ತಿರುವ ರೇಶನ್ ಕಿಟ್‌ಗಳಲ್ಲಿ ಸಾಕಷ್ಟು ಆಹಾರ ಇಲ್ಲ'' ಎಂದು ಅವರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

''ಈ ಜನರು ಹಸಿದಿದ್ದಾರೆ. ಹಸಿವಿನಿಂದ ಸಾಯುತ್ತಿದ್ದಾರೆ'' ಎಂದರು.

ಬಾಂಗ್ಲಾದೇಶದಲ್ಲಿರುವ ನಿರಾಶ್ರಿತ ಶಿಬಿರಗಳಲ್ಲಿ ಈಗಾಗಲೇ 4 ಲಕ್ಷ ರೊಹಿಂಗ್ಯರು ವಾಸಿಸುತ್ತಿದ್ದಾರೆ. ಹೊಸದಾಗಿ ನಿರಾಶ್ರಿತರು ಬರುತ್ತಿರುವ ಹಿನ್ನೆಲೆಯಲ್ಲಿ ಈ ಶಿಬಿರಗಳ ಮೇಲೆ ಅಗಾಧ ಒತ್ತಡ ಬಿದ್ದಿದೆ. ಹೊಸದಾಗಿ ಬಂದವರಿಗೆ ಮಳೆಯಿಂದ ರಕ್ಷಿಸಿಕೊಳ್ಳಲು ಸ್ಥಳವಿಲ್ಲವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News