ಮೋದಿಗೆ ‘ಕ್ಲೀನ್‌ಚಿಟ್’ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಪ್ರಕರಣ: ತೀರ್ಪು ಪ್ರಕಟನೆ ಮುಂದೂಡಿದ ಗುಜರಾತ್ ಹೈಕೋರ್ಟ್

Update: 2017-09-08 14:25 GMT

ಅಹ್ಮದಾಬಾದ್, ಸೆ.8: 2002ರ ಗಲಭೆ ಪ್ರಕರಣದಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಇತರರಿಗೆ ‘ಕ್ಲೀನ್ ಚಿಟ್’ ನೀಡಿದ್ದ ಕೆಳನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ , ಹತ್ಯೆಗೀಡಾದ ಕಾಂಗ್ರೆಸ್ ಮುಖಂಡ ಎಹ್ಸಾನ್ ಜಾಫ್ರಿಯವರ ಪತ್ನಿ ಝಕಿಯ ಗುಜರಾತ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯ ಕುರಿತ ತೀರ್ಪು ಪ್ರಕಟನೆಯನ್ನು ಮುಂದೂಡಲಾಗಿದೆ.

ಇಂದು(ಸೆ.8ರಂದು) ತೀರ್ಪು ಹೊರಬೀಳುವ ನಿರೀಕ್ಷೆಯಿತ್ತು. ಇದಕ್ಕೂ ಮುನ್ನ ನ್ಯಾಯಾಲಯವು 2002ರ ದೊಂಬಿ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನ ಬಗ್ಗೆ ಜಾಫ್ರಿ ಪರ ವಕೀಲರು ಹಾಗೂ ವಿಶೇಷ ತನಿಖಾ ತಂಡಕ್ಕೆ ಹಲವು ಪ್ರಶ್ನೆಗಳನ್ನು ಕೇಳಿತ್ತು. ವಿಶೇಷ ತನಿಖಾ ದಳವು 2002ರ ದೊಂಬಿ ಘಟನೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಸಂಚು ಹೂಡಿದ್ದ ಆರೋಪದಿಂದ ಮೋದಿ ಹಾಗೂ ಇತರರಿಗೆ ‘ಕ್ಲೀನ್‌ಚಿಟ್’ ನೀಡಿತ್ತು ಹಾಗೂ ಪ್ರಕರಣವನ್ನು ಮುಕ್ತಾಯಗೊಳಿಸಿದ ವರದಿಯನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇದನ್ನು ಪ್ರಶ್ನಿಸಿ ಮೆಟ್ರೊಪಾಲಿಟನ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಝಕಿಯ, ಮೋದಿ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಸಂಚು ಆರೋಪ ದಾಖಲಿಸುವಂತೆ ಮನವಿ ಸಲ್ಲಿಸಿದ್ದರು. ಇದನ್ನು 2013ರಲ್ಲಿ ಕೋರ್ಟ್ ತಳ್ಳಿಹಾಕಿದ ಬಳಿಕ 2014ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News