ಪಾಕಿಸ್ತಾನ ಭಯೋತ್ಪಾದನೆ ನಿಗ್ರಹದಲ್ಲಿ ಶ್ರೇಷ್ಠ ಬಲಿದಾನ ಮಾಡಿದೆ: ಚೀನಾ

Update: 2017-09-08 16:41 GMT

ಬೀಜಿಂಗ್, ಸೆ. 8: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ಭಾರೀ ಬಲಿದಾನಗಳನ್ನು ಮಾಡಿದೆ ಹಾಗೂ ಅದು ಶುದ್ಧ ಅಂತಃಕರಣವನ್ನು ಹೊಂದಿದೆ ಎಂದು ಚೀನಾ ಶುಕ್ರವಾರ ಹೇಳಿದೆ.

ತನ್ನ ನೆಲದಲ್ಲಿ ಆಶ್ರಯ ಪಡೆಯುತ್ತಿರುವ ಭಯೋತ್ಪಾದಕ ಗುಂಪುಗಳ ವಿರುದ್ಧ ಪಾಕಿಸ್ತಾನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದಾಗಿ ಚೀನಾ ಸೇರಿದಂತೆ ‘ಬ್ರಿಕ್ಸ್’ ದೇಶಗಳು ಜಂಟಿ ಘೋಷಣೆಯನ್ನು ಹೊರಡಿಸಿದ ಕೇವಲ ಐದು ದಿನಗಳ ಬಳಿಕ ಚೀನಾ ತಿರುಗಿಬಿದ್ದಿದೆ.

ಚೀನಾ ಪ್ರವಾಸದಲ್ಲಿರುವ ಪಾಕಿಸ್ತಾನದ ವಿದೇಶ ಸಚಿವ ಖವಾಜ ಮುಹಮ್ಮದ್ ಆಸಿಫ್ ಜೊತೆ ಇಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೀನಾ ವಿದೇಶ ಸಚಿವ ವಾಂಗ್ ಯಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಪಾಕಿಸ್ತಾನ ಮಾಡಿರುವ ಶ್ರೇಷ್ಠ ಬಲಿದಾನಗಳನ್ನು ಕೆಲವು ದೇಶಗಳು ಗುರುತಿಸಬೇಕು ಎಂದು ವಾಂಗ್ ನುಡಿದರು.

‘‘ಜಾಗತಿಕ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ಒಂದು ಮಹತ್ವದ ಪಾಲುದಾರನಾಗಿದೆ’’ ಎಂದು ವಾಂಗ್ ಹೇಳಿರುವುದಾಗಿ ಪಾಕಿಸ್ತಾನದ ‘ಜಿಯೋ ನ್ಯೂಸ್’ ವರದಿ ಮಾಡಿದೆ.

ಪಾಕಿಸ್ತಾನದಲ್ಲಿ ಕಾರ್ಯಾಚರಿಸುತ್ತಿರುವ ಲಷ್ಕರ್ ತಯ್ಯಬ ಮತ್ತು ಜೈಶ್ ಮುಹಮ್ಮದ್ ಮುಂತಾದ ಭಯೋತ್ಪಾದಕ ಸಂಘಟನೆಗಳು ಐಸಿಸ್ ಉಗ್ರ ಸಂಘಟನೆಗೆ ಸಮವಾಗಿವೆ ಹಾಗೂ ಅವುಗಳು ಹಿಂಸೆಯಲ್ಲಿ ತೊಡಗಿದ್ದು, ಈ ವಲಯದಲ್ಲಿ ಅಸ್ಥಿರತೆಗೆ ಕಾರಣವಾಗಿವೆ ಎಂಬುದಾಗಿ ಬ್ರೆಝಿಲ್, ರಶ್ಯ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಗಳನ್ನೊಳಗೊಂಡ ‘ಬ್ರಿಕ್ಸ್’ ದೇಶಗಳು ಇತ್ತೀಚೆಗೆ ಚೀನಾದ ಕ್ಸಿಯಾಮೆನ್‌ನಲ್ಲಿ ಮುಕ್ತಾಯಗೊಂಡ ಶೃಂಗಸಭೆಯಲ್ಲಿ ಹೊರಡಿಸಿದ ಜಂಟಿ ಘೋಷಣೆಯಲ್ಲಿ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News