ಬಿ.ಸಿ.ರೋಡ್: ಗೌರಿ ಲಂಕೇಶ್ ಹತ್ಯೆ ಮತ್ತು ಪತ್ರಕರ್ತನ ಅಕ್ರಮ ಬಂಧನ ಖಂಡಿಸಿ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ

Update: 2017-09-10 10:26 GMT

ಫರಂಗಿಪೇಟೆ ಸೆ.10: ವಾರ್ತಾಭಾರತಿಯ ಬಂಟ್ವಾಳ ತಾಲೂಕಿನ ಮುಖ್ಯ ವರದಿಗಾರ ಇಮ್ತಿಯಾಝ್ ಶಾ ಅವರ ಅಕ್ರಮ ಬಂಧನ ಮತ್ತು ಹಿರಿಯ ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಬಿ.ಸಿ.ರೋಡಿನ ಮೇಲ್ಸೇತುವೆ ಬಳಿ ಇಂದು ಪ್ರತಿಭಟನೆ ನಡೆಯಿತು. 

ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರು ಲಂಕೇಶ್ ಹತ್ಯೆಯ ದುಷ್ಕರ್ಮಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕ್ಯಾಂಪಸ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಫಯಾಝ್ ದೊಡ್ಡಮನೆ ಮಾತನಾಡಿ, ಪತ್ರಕರ್ತರ ಮೇಲಿನ ದೌರ್ಜನ್ಯ ಹಾಗೂ ಅಕ್ರಮ ಬಂಧನ ಪತ್ರಿಕಾ ಸ್ವಾತಂತ್ರ್ಯದ ದಮನ. ಪತ್ರಕರ್ತ ಇಮ್ತಿಯಾಝ್ ಶಾ ತಾಲೂಕಿನಲ್ಲಿ ನಡೆಯುವ ಅನ್ಯಾಯ, ದೌರ್ಜನ್ಯಗಳ ವಿರುದ್ದ ನ್ಯಾಯಯುತವಾಗಿ ವರದಿ ಮಾಡಿದ್ದೇ ತಪ್ಪಾಯಿತೇ? ಸಂವಿಧಾನ ಬದ್ಧವಾಗಿ ವರದಿ ಮಾಡುವವರ ಧ್ವನಿಯನ್ನು ಅಡಗಿಸುವ ಷಡ್ಯಂತ್ರವು ಖಂಡನೀಯ ಎಂದರು.

ಮತ್ತು ಹಿರಿಯ ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಅವರ ಹತ್ಯೆ ಖಂಡನೀಯ. ವಿಚರವಾದಿಗಳನ್ನು ಗುಂಡಿಕ್ಕಿ ಕೊಲ್ಲುವ ಮೂಲಕ ಭಾರತದಾದ್ಯಂತ ಸರಣಿ ಹತ್ಯೆಗಳು ಮುಂದುವರಿಯುತ್ತಿದ್ದು, ಇದು ಸಂಘಟಿತವಾಗಿ ನಡೆಸುತ್ತಿರುವ ಪ್ರಜಾಪ್ರಭುತ್ವದ ಮೇಲಿನ ಹಲ್ಲೆಯಾಗಿದೆ. ಆದರೆ ಈ ಮೂಲಕ ಹೋರಾಟವನ್ನು ಮುಗಿಸಲು ಸಾಧ್ಯವಿಲ್ಲ. ಒಬ್ಬರು ಗೌರಿ ಲಂಕೇಶ್ ರನ್ನು ಕೊಂದರೆ ಅವರಂತೆ ಸಾವಿರಾರು ಲಂಕೇಶರು ಅವರ ದೌತ್ಯವನ್ನು ಪೂರ್ತಿಗೊಳಿಸಲು ಹುಟ್ಟುತ್ತಾರೆ ಎಂದರು.

ಸಿ.ಎಫ್.ಐ. ಬಂಟ್ವಾಳ ತಾಲೂಕು ಅಧ್ಯಕ್ಷ ನಬೀಲ್ ರಹ್ಮಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ರಾನ್ ಪಿ.ಜೆ. ಮೊದಲಾದವರು ಉಪಸ್ಥಿತರಿದ್ದರು.

ಅಥಾವುಲ್ಲ ನಾಸೀರ್ ಕಾರ್ಯಕ್ರಮ ನಿರೂಪಿಸಿದರು. ಶಿಹಾಬ್  ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News